ಬೆಂಗಳೂರು: ಬಿಬಿಎಂಪಿಯ 51 ನೇ ಮೇಯರ್ ಆಗಿ ಡಿಜೆ ಹಳ್ಳಿ ವಾರ್ಡ್‍ನ ಕಾಂಗ್ರೆಸ್ ಕಾರ್ಪೋರೇಟರ್ ಆರ್.ಸಂಪತ್‍ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 50ನೇ ಉಪಮೇಯರ್ ಆಗಿ ರಾಜಗೋಪಾಲನಗರ ವಾರ್ಡ್‍ನ ಜೆಡಿಎಸ್ ಪಾಲಿಕೆ ಸದಸ್ಯೆ ಪದ್ಮಾವತಿ ನರಸಿಂಹಮೂರ್ತಿ ಅವರು ಆಯ್ಕೆಯಾಗಿದ್ದಾರೆ.
ಚುನಾವಣೆಗೂ ಮೊದಲೇ ಬಿಜೆಪಿಯವರು ಸಭೆ ಬಹಿಷ್ಕರಿಸಿ ಹೊರನಡೆದಿದ್ದರಿಂದ ಮೇಯರ್ ಮತ್ತು ಉಪಮೇಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನೂತನ ಮೇಯರ್ ಮತ್ತು ಉಪಮೇಯರ್ ಆಯ್ಕೆ ಆಗುತ್ತಿದ್ದಂತೆ ಕಾರ್ಯಕರ್ತರು ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಉಪಮೇಯರ್ ಪದ್ಮಾವತಿ 138 ವೋಟು ಹಾಗೂ ಮೇಯರ್ ಸಂಪತ್‍ರಾಜ್ 139 ಮತಗಳನ್ನು ಪಡೆದು ಜಯಶಾಲಿಗಳಾಗಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಮೂಲಭೂತ ಸೌಕರ್ಯ ಒದಗಿಸೋದು, ಮಧ್ಯರಾತ್ರಿಯಲ್ಲಿ ಮಹಿಳೆಯರು ನಗರದಲ್ಲಿ ನಿರಾತಂಕವಾಗಿ ಓಡಾಡುವಂತೆ ಮಾಡೋದು ನನ್ನ ವಿಷನ್ ಅಂತ ನೂತನ ಮೇಯರ್ ಸಂಪತ್ ರಾಜ್ ಹೇಳಿದರು.
ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪ್ರಕೃತಿ ಮುಂದೆ ನಾವು ಏನು ಮಾಡೋಕು ಆಗಲ್ಲ. ಇಷ್ಟೊಂದು ಮಳೆ ಯಾವತ್ತೂ ಬಂದಿರಲಿಲ್ಲ. ಸುಮಾರು ಒಳ್ಳೆ ಕೆಲಸಗಳು ಆಗಿದ್ದವು. ಅದರಲ್ಲೂ ಎಲ್ಲಾ ರಸ್ತೆಗಳು ರೆಡಿಯಾಗಿದ್ದವು. ಆದರೆ ಈಗ ಎಲ್ಲಾ ರಸ್ತೆಗಳು ಪಾಟ್‍ಹೌಸ್ ಆಗಿವೆ. ಅದನ್ನು ನಾವು ಈಗ ಚಾಲೆಂಜ್ ಆಗಿ ತಗೊಂಡು ಮಾಡಬೇಕಾಗುತ್ತದೆ. ಇಡೀ ಬೆಂಗಳೂರಿನಲ್ಲಿ ಎಷ್ಟು ಸ್ಲಂಗಳಿದವೋ ಅವುಗಳೆಲ್ಲವನ್ನು ಡೆವಲಪ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಏಕೆಂದರೆ ಸ್ಲಂ ಜನರ ಕಷ್ಟಗಳನ್ನು ನಾನು 7 ವರ್ಷಗಳಿಂದ ನೋಡಿದ್ದೇನೆ. ಆದ್ದರಿಂದ ಅವರ ಅಭಿವೃದ್ಧಿ ಮಾಡೇ ಮಾಡುತ್ತೇನೆ ಎಂದು ತಮ್ಮ ಆಕಾಂಕ್ಷೆಗಳನ್ನು ಹೇಳಿಕೊಂಡರು.
ಇದೇ ವೇಳೆ ಮಾತನಾಡಿದ ನೂತನ ಉಪಮೇಯರ್ ಪದ್ಮಾವತಿ, ಬೆಂಗಳೂರಿನ ಜನರ ಸಮಸ್ಯೆಗೆ ಪರಿಹಾರ ನೀಡೋದು ನನ್ನ ಮೊದಲ ಆದ್ಯತೆ. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತೇವೆ ಅಂದ್ರು.