ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದರೆ, ಉಪಮೇಯರ್ ಸ್ಥಾನಕ್ಕೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ.
ಮೇಯರ್ ಹುದ್ದೆಗೆ ಬಿಜೆಪಿಯಿಂದ ಗೌತಮ್ ಕುಮಾರ್ ಜೈನ್, ಪದ್ಮನಾಭರೆಡ್ಡಿ ನಾಮಪತ್ರ ಸಲ್ಲಿಸಿದರೆ ಉಪ ಮೇಯರ್ ಹುದ್ದೆಗೆ ಮಹಾಲಕ್ಷ್ಮಿ ರವೀಂದ್ರ, ಗುರುಮೂರ್ತಿ ರೆಡ್ಡಿ, ಮೋಹನ್ ರಾಜ್ ನಾಮಪತ್ರ ಸಲ್ಲಿಸಿದ್ದಾರೆ.
Advertisement
Advertisement
ಹೆಚ್ಚು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಸಭೆಯಲ್ಲಿ ಆರ್ ಅಶೋಕ್ ಹಾಗೂ ಅಶ್ವಥ್ ನಾರಾಯಣ ವಿರುದ್ಧ ಗರಂ ಆಗಿರುವ ಗೌತಮ್ ಜೈನ್, ಪಕ್ಷದ ಅಧಿಕೃತ ಅಭ್ಯರ್ಥಿ ನಾನು. ಆದರೆ ಪದ್ಮನಾಭ ರೆಡ್ಡಿ ಹೇಗೆ ನಾಮಪತ್ರ ಸಲ್ಲಿಸಿದರು ಎಂದು ಪ್ರಶ್ನಿಸಿದ್ದಾರೆ.
Advertisement
ಅಲ್ಲದೆ ನನಗೆ ಪಕ್ಷದ ಹಿರಿಯರು, ಸಂಘಟನೆಯವರು ಎಲ್ಲರೂ ಸೇರಿ ನಾಮಪತ್ರ ಸಲ್ಲಿಸಲು ಹೇಳಿದ್ದಾರೆ. ಹೀಗಾಗಿ ಅವರ ಮುಖಾಂತರ ಬಂದು ನಾನು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಇಬ್ಬರು ನಾಮಪತ್ರ ಸಲ್ಲಿಸಿದರೆ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಗೌತಮ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಮೇಯರ್ ಅಭ್ಯರ್ಥಿ – ಬಿಎಸ್‍ವೈ ವಿರುದ್ಧ ಸೆಡ್ಡು ಹೊಡೆದು ಗೆದ್ದ ಕಟೀಲ್
Advertisement
ಇತ್ತ ಪದ್ಮನಾಭ ರೆಡ್ಡಿ ಅವರು ಬಂಡಾಯವಾಗಿ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷ ನನಗೆ ನಾಮಪತ್ರ ಸಲ್ಲಿಸುವಂತೆ ಸೂಚನೆ ಕೊಟ್ಟಿದೆ. ಹೀಗಾಗಿ ನಾನು ನನ್ನ ಕಾರ್ಪೋರೇಟರ್ ಜೊತೆಗೆ ಬಂದು ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಬಂಡಾಯದ ಬಗ್ಗೆ ಹೇಳಿದ್ದೇನು?
ನನ್ನ ನಾಯಕರಾದ ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ, ಬೆಂಗಳೂರು ನಗರದ ನಾಯಕಾರದ ಆರ್ ಅಶೋಕ್ ಹಾಗೂ ಎಲ್ಲಾ ಶಾಸಕ, ಸಂಸದರು ಒಟ್ಟಾಗಿ ಶಿಸ್ತಿನ ಪಕ್ಷದಲ್ಲಿದ್ದೇವೆ. ಹೀಗಾಗಿ ಪಕ್ಷ ಆದೇಶ ಮಾಡಿದ್ದು ನಾಮಪತ್ರ ಸಲ್ಲಿಸಿದ್ದೇನೆ. ಒಟ್ಟಿನಲ್ಲಿ ಪಕ್ಷದ ಆದೇಶಕ್ಕೆ ತಲೆ ಬಾಗುತ್ತೇನೆ. ಇಲ್ಲಿ ಬಂಡಾಯದ ಪ್ರಶ್ನೆಯೇ ಇಲ್ಲ ಎಂದು ಪದ್ಮನಾಭ ರೆಡ್ಡಿ ಹೇಳಿದ್ದಾರೆ.
ಗೌತಮ್ ನನ್ನ ಸಹೋದರ. ಅಂತಿಮವಾಗಿ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಅಷ್ಟಕ್ಕೂ ಇಬ್ಬರು ನಾಮಪತ್ರ ಸಲ್ಲಿಸಬಾರದೆಂದು ಕಾನೂನಿನಲ್ಲಿ ಇಲ್ಲವಲ್ವ. ಇಲ್ಲಿ ಬಂಡಾಯದ ಪ್ರಶ್ನೆ ಉದ್ಭವವಾಗಲ್ಲ. ನನ್ನ ಪಕ್ಷ ನಾಮಪತ್ರ ಸಲ್ಲಿಸಿ ಎಂದು ಹೇಳಿದೆ, ಅದಕ್ಕೆ ಸಲ್ಲಿಕೆ ಮಾಡಿದ್ದೇನೆ ಪದ್ಮನಾಭ ರೆಡ್ಡಿ ತಿಳಿಸಿದರು. ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ನಮ್ಮ ಬಿಜೆಪಿ ಪಕ್ಷವನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ಸಿನವರು ಇದರಿಂದ ಲಾಭ ಪಡೆಯುತ್ತಾರೆ ಅಂದುಕೊಂಡರೆ ಅದು ತಿರುಕನ ಕನಸಾಗಿರುತ್ತದೆ ಎಂದರು.
ಒಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಗೌತಮ್ ಜೈನ್ ಅವರನ್ನು ನಾಮಪತ್ರ ಸಲ್ಲಿಕೆ ಮಾಡಲು ತಿಳಿಸಿದ್ರೆ, ಇತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪದ್ಮನಾಭ ರೆಡ್ಡಿಯವರನ್ನು ನಾಮ ಪತ್ರ ಸಲ್ಲಿಸುವಂತೆ ಸೂಚಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸತ್ಯನಾರಾಯಣ ನಾಮಪತ್ರ ಸಲ್ಲಿಕೆ ಮಾಡಿದರೆ ಉಪಮೇಯರ್ ಸ್ಥಾನಕ್ಕೆ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ.