-ಅಫಿಡವಿಟ್ ಸಲ್ಲಿಸಲು ರಾಜ್ಯಕ್ಕೆ ಸುಪ್ರೀಂ ನಿರ್ದೇಶನ
ನವದೆಹಲಿ: ನವೆಂಬರ್-ಡಿಸೆಂಬರ್ ವೇಳೆಗೆ ಬಿಬಿಎಂಪಿ (BBMP) ಚುನಾವಣೆ ನಡೆಯಬಹುದು ಎಂಬ ಕಾರ್ಪೋರೇಟರ್‌ಗಳ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದೆ. ಜನವರಿ ಬಳಿಕವೇ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.
ಬಿಬಿಎಂಪಿ ಚುನಾವಣೆ ವಿಳಂಬಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಕಾಲಾನುಕ್ರಮದಲ್ಲಿ ಔಪಚಾರಿಕ ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.ಇದನ್ನೂ ಓದಿ:Operation MAHADEV | ಪಹಲ್ಗಾಮ್ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಚುನಾವಣೆ ಸಾಕಷ್ಟು ವಿಳಂಬವಾಗಿದೆ, ಬಿಬಿಎಂಗೆ ಚುನಾವಣೆ ನಡೆದು ಹತ್ತು ವರ್ಷಗಳಾಗಿವೆ. ಚುನಾವಣೆ ನಡೆಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಎ.ಎಂ ಸಿಂಘ್ವಿ ಮತ್ತು ಅಡ್ವಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಗ್ರೇಟರ್ ಬೆಂಗಳೂರು ಕಾಯಿದೆಯನ್ನು ರಾಜ್ಯಪಾಲರು ಎರಡು-ಮೂರು ತಿಂಗಳು ತಡೆ ಹಿಡಿದಿದ್ದರು. ಇದರಿಂದ ಚುನಾವಣೆ ವಿಳಂಬವಾಗಿದೆ ಎಂದು ಹೇಳಿದರು.
ಮುಂದುವರಿದು ವಾದ ಮಂಡಿಸಿದ ಸರ್ಕಾರದ ಪರ ವಕೀಲ ಸಿಂಘ್ವಿ ಅವರು, ನವೆಂಬರ್ ವೇಳೆಗೆ ಕ್ಷೇತ್ರ ವಿಂಗಡನೆ, ಮೀಸಲಾತಿ ಸೇರಿ ಎಲ್ಲ ಪ್ರಕ್ರಿಯೆ ಮುಗಿಯಲಿದೆ. ಆನಂತರ ಚುನಾವಣಾ ಆಯೋಗ ಚುನಾವಣೆ ನಡೆಸಬಹುದು ಎಂದರು. ಇಲ್ಲಿ ಮಧ್ಯಪ್ರವೇಶ ಮಾಡಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಫಣೀಂದ್ರ ಅವರು, ನವೆಂಬರ್‌ಗೆ ಪ್ರಕ್ರಿಯೆ ಮುಗಿದರೆ ಮತದಾರರ ಪಟ್ಟಿ ಸೇರಿ ಇತರೆ ಪ್ರಕ್ರಿಯೆ ಮುಗಿಸಲು ನಮಗೆ ಎರಡು ತಿಂಗಳ ಸಮಯ ಬೇಕಾಗಬಹುದು ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ಬಳಿಕ, ರಾಜ್ಯ ಸರ್ಕಾರವು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾಲಾನುಕ್ರಮ ಒಳಗೊಂಡ ಔಪಚಾರಿಕ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚಿಸಿದೆ ಮತ್ತು ವಿಚಾರಣೆಯನ್ನು ಸೋಮವಾರಕ್ಕೆ (ಆ.4) ಮುಂದೂಡಿತು.
ಈ ಹಿಂದೆ 6 ವಾರಗಳಲ್ಲಿ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಚುನಾವಣೆ ಆಯೋಗಕ್ಕೆ ಸೂಚಿಸಿತ್ತು. ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ (ತಿದ್ದುಪಡಿ)ಕಾಯ್ದೆಯಡಿ ರಚಿಸಲಾಗುವ 243 ವಾರ್ಡ್ ಬದಲಿಗೆ ಮೊದಲಿದ್ದ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ರಾಜ್ಯ ಸರ್ಕಾರ ಪ್ರಶ್ನಿಸಿತ್ತು, ವಿಚಾರಣೆ ಬಳಿಕ 2020ರ ಡಿ.18ರಂದು ಅಮಾನತಲ್ಲಿ ಇಟ್ಟಿತ್ತು.ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ನೇತ್ರಾವತಿ ತಟದಲ್ಲಿ ಎಸ್‌ಐಟಿಯಿಂದ ಸ್ಥಳ ಮಹಜರು