ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಶಾಸಕ ಮುನಿರತ್ನ ಅವರು ಅಸಮಾಧಾನ ಹೊರಹಕಿದ್ದಾರೆ.
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಶಾಸಕರು, ಹಣ ಕೊಟ್ಟರೆ ರಾತ್ರೋ ರಾತ್ರಿ ಡಾಂಬರ್ ಹಾಕುತ್ತಾರೆ. ಆದರೆ ರಸ್ತೆ ಅಗಲೀಕರಣ ವಿಚಾರದಲ್ಲಿ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. 2006ರಿಂದಲೂ ನಗರದಲ್ಲಿ ರಸ್ತೆ ಅಗಲೀಕರಣ ಆಗಿಲ್ಲ ಎಂದು ಗುಡುಗಿದರು.
Advertisement
Advertisement
ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರತಿ ದಿನ 100 ಜನರೂ ಊಟ ಮಾಡುತ್ತಿಲ್ಲ. ಸದ್ಯ ಇರುವ ಗುತ್ತಿಗೆದಾರರನ್ನು ರದ್ದು ಮಾಡಿ, ಹೊಸದಾಗಿ ಗುತ್ತಿಗೆದಾರರಿಗೆ ನೀಡಿ. ಈ ಸಂಬಂಧ ಆಗಸ್ಟ್‍ನಲ್ಲಿ ಹೊಸ ಟೆಂಡರ್ ನೀಡಬೇಕು ಎಂದು ಆಗ್ರಹಿಸಿದರು.
Advertisement
ಈ ವೇಳೆ ಧ್ವನಿಗೂಡಿಸಿದ ಬಿಬಿಎಂಪಿ ಬಿಜೆಪಿ ಸದಸ್ಯ ಡಾ.ರಾಜು ಅವರು, ಚೆನ್ನಾಗಿಲ್ಲದ ಇಂದಿರಾ ಕ್ಯಾಂಟೀನ್ ಊಟವನ್ನೇ ಕೌನ್ಸಿಲ್ ಸಭೆಯಲ್ಲಿ ನಮಗೆ ಕೊಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದದಿಂದಲೇ ಊಟದ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಊಟದ ಲೆಕ್ಕದಲ್ಲಿಯೂ ವ್ಯತ್ಯಾಸವಾಗುತ್ತಿದೆ. ತಿಂದವರು 10 ಜನ, ಆದರೆ ಬಿಲ್ ಇರುವುದು 100 ಜನರದ್ದು. ಕೂಡಲೇ ಲೆಕ್ಕದಲ್ಲಿ ಆಗುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಿ ಎಂದು ಪಕ್ಷಾತೀತವಾಗಿ ಆಗ್ರಹ ಕೇಳಿ ಬಂದಿತು.
Advertisement
ಬಿಬಿಎಂಪಿ ಕೌನ್ಸಿಲ್ ಸಭೆಯ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಹೊಸ ಅಪಾರ್ಟ್‍ಮೆಂಟ್‍ಗಳಿಗೆ ಅನುಮತಿ ನೀಡಬಾರದು. ಈ ಕುರಿತಂತೆ ಗುರುವಾರ ಡಿಸಿಎಂ ಜಿ.ಪರಮೇಶ್ವರ್ ವಿಚಾರ ಪ್ರಸ್ತಾಪಿಸಿದ್ದರು. ನಗರದ ಹಿತ ದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದು ಎಂದು ಹೇಳಿದರು.
ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿದೆ. ಜಲಮಮಂಡಳಿ ಪೂರೈಕೆ ಮಾರುತ್ತಿರುವ ನೀರಿನಲ್ಲಿ ಶೇ.40ರಷ್ಟು ಸೋರಿಕೆ ಆಗುತ್ತಿದೆ. ಪೆಟ್ರೋಲ್, ಡೀಸೆಲ್ ಲಕ್ಷಾಂತರ ಲೀಟರ್ ಪೂರೈಕೆ ಆಗುತ್ತಿದ್ದರೂ ಒಂದು ಹನಿಯೂ ಸೋರಿಕೆ ಆಗುತ್ತಿಲ್ಲ. ಆದರೆ ಜಲಮಂಡಳಿ ನೀರು ಮಾತ್ರ ಸೋರಿಕೆ ಆಗುತ್ತಿದೆ. ಇದು ಜಲಮಂಡಳಿ ನಿರ್ಲಕ್ಷ್ಯವನ್ನು ತಿಳಿಸುತ್ತದೆ ಎಂದು ಚಾಟಿ ಬೀಸಿದರು.
ಈ ಮಧ್ಯೆ ಸಭೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರಗಳು, ಶಾಲೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡುವಂತೆ ಆಗ್ರಹ ಕೇಳಿ ಬಂದಿತು. ಲೈಬ್ರರಿ ಸೆಸ್, ಬೆಗ್ಗರ್ ಸೆಸ್ ಹಣ ಪಾಲಿಕೆ ವ್ಯಾಪ್ತಿಗೆ ಸೇರಬೇಕು. ಬಿಬಿಎಂಪಿ ತೆರಿಗೆ ಸಂಗ್ರಹಿಸಿ ರಾಜ್ಯಕ್ಕೆ ಕೊಡುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಿ ಎಂಬ ಆಗ್ರಹ ಕೇಳಿ ಬಂದಿತು.
ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿ, ತೆರಿಗೆ ಹಣ ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಆಡಳಿತ ಪಕ್ಷ ವಿಫಲವಾಗಿದೆ. ಅಭಿವೃದ್ಧಿ ಹೆಸರಲ್ಲಿ ಹಣ ಪೋಲು ಮಾಡಲಾಗುತ್ತದೆ. ಟ್ರಾಫಿಕ್, ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಡಳಿತದಲ್ಲಿ ಹೊಸದಾಗಿ ಯಾವುದೇ ನೀರಿನ ಯೋಜನೆ ಜಾರಿ ತಂದಿಲ್ಲ. ಬಿಜೆಪಿ ಆಡಳಿತದಲ್ಲಿದ್ದಾಗ ನೀರಿನ ಯೋಜನೆ ಕೈಗೊಂಡಿದ್ದೇವು. ಆದರೆ ರಾಜ್ಯ, ಬಿಬಿಎಂಪಿ ಆಡಳಿತ ವರ್ಗ ಹೊಸ ಯೋಜನೆ ಜಾರಿಗೆ ತರಲು ವಿಫಲವಾಗಿವೆ ಎಂದು ಅಸಮಧಾನ ಹೊರ ಹಾಕಿದರು.