-ಇದೇ ಮೊದಲ ಬಾರಿಗೆ ಮಹಿಳಾ ಮೇಯರ್ ಆಯವ್ಯಯ ಮಂಡನೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2019-20ನೇ ಸಾಲಿನ ಬಜೆಟ್ ಸೋಮವಾರ ಮಂಡನೆಯಾಗಲಿದೆ ಬಿಬಿಎಂಪಿ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಮಹಿಳೆ ಮೇಯರ್ ಬಜೆಟ್ ಮಂಡನೆ ಮಾಡುತ್ತಿದ್ದು, ಅವರ ಗಮನ ಮಹಿಳಾ ಕಲ್ಯಾಣ ಯೋಜನೆಗಳ ಕಡೆಗೆ ನೀಡುವ ಮೂಲಕ ಬಜೆಟ್‍ಗೆ ಗುಲಾಬಿ ಬಣ್ಣ ಬಳಿಯುವ ಸಾಧ್ಯತೆಗಳಿವೆ. ಬಿಬಿಎಂಪಿಯಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದ ನಾಲ್ಕನೇಯ ಅವಧಿಯ ಬಜೆಟ್ ಇದಾಗಿದ್ದು, ಮಹಿಳೆಯರ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಅಲ್ಲದೆ, ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಅವರ ಹೆಸರಿನಲ್ಲಿ ನಗರದ ಅತ್ಯುತ್ತಮ ಶಿಕ್ಷಣ ಸಂಸ್ಥೆಗೆ ಪ್ರತಿ ವರ್ಷ ಪ್ರಶಸ್ತಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಬಿಬಿಎಂಪಿಯ ಎಲ್ಲ ವಿಭಾಗಗಳೊಂದಿಗೆ ಚರ್ಚೆ ನಡೆಸಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ, ಬಜೆಟ್‍ನಲ್ಲಿ ಯಾವೆಲ್ಲ ಯೋಜನೆ ಘೋಷಿಸಬೇಕು ಎಂಬುದನ್ನು ಅಂತಿಮಗೊಳಿಸಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಕೌನ್ಸಿಲ್ ಸಭಾಂಗಣದಲ್ಲಿ 2019-20ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.
Advertisement
Advertisement
ರಾಜ್ಯ ಸರ್ಕಾರ ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಮುಂದಿನ ಮೂರು ವರ್ಷಗಳಿಗೆ 8,015 ಕೋಟಿ ರು. ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅದಕ್ಕೆ ಪೂರಕವಾದ ಯೋಜನೆಗಳ ಬಗ್ಗೆ ಮಾತ್ರ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಸಿದ್ಧಪಡಿಸುವುದಕ್ಕೆ ಮುಂದಾಗಿದೆ. ಹೀಗಾಗಿ ಈ ವರ್ಷ ಭಾರೀ ಮೊತ್ತದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಬಿಬಿಎಂಪಿ ಬಜೆಟ್‍ನಲ್ಲಿ ಘೋಷಣೆ ಮಾಡುವುದು ಅನುಮಾನವಾಗಿದೆ.
Advertisement
Advertisement
ಬಿಬಿಎಂಪಿ ಆಯುಕ್ತರು .8,300 ಕೋಟಿ ಮೊತ್ತದ ಕರಡು ಬಜೆಟನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಿದ್ದರು. ಅದಕ್ಕೆ ಇನ್ನಷ್ಟು ಯೋಜನೆಗಳನ್ನು ಸೇರಿಸಿರುವ ಸ್ಥಾಯಿ ಸಮಿತಿ 2019-20ನೇ ಸಾಲಿಗೆ 10,600 ಕೋಟಿಗೂ ಹೆಚ್ಚು, 11 ಸಾವಿರ ಕೋಟಿ ಮೀರದಂತೆ ಬಜೆಟ್ ಮಂಡನೆ ಮಾಡುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ. ಶೇ.55ರಷ್ಟು ಕಳೆದ ಬಜೆಟ್ ಅನುಷ್ಠಾನ ವಿಧಾನಸಭಾ ಚುನಾವಣೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ನಿರ್ಲಕ್ಷ್ಯದಿಂದಾಗಿ 2018-19ನೇ ಸಾಲಿನ ಬಜೆಟ್ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಮೂಲಗಳ ಪ್ರಕಾರ 2018-19ನೇ ಸಾಲಿನ ಬಜೆಟ್ ಶೇ.55ರಷ್ಟು ಮಾತ್ರ ಅನುಷ್ಠಾನಗೊಂಡಿದೆ ಎಂದು ಹೇಳಲಾಗುತ್ತಿದೆ. ಉಳಿದ ಯೋಜನೆಗಳ ಅನುಷ್ಠಾನವನ್ನು 2019-20ಕ್ಕೆ ನಿಗದಿ ಮಾಡಲಾಗುತ್ತದೆ. ಉತ್ತಮ ಬಜೆಟ್ ನಿರೀಕ್ಷೆ ಇದೆ ಎಂದು ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ತಿಳಿಸಿದರು.
ವೈಜ್ಞಾನಿಕ ಮತ್ತು ವಾರ್ಡ್ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿಗೆ ಆದ್ಯತೆ, ಉದ್ಯಾನಗಳಲ್ಲಿನ ಎಲೆಗಳನ್ನು ಸಾವಯವ ಗೊಬ್ಬರವಾಗಿ ಮಾರ್ಪಾಡಿಸಬೇಕು. ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಹಿಂದುಳಿದವರಿಗೆ ಘೋಷಿಸುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು. ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ ಅಕ್ಷರ ದಾಸೋಹ, ಶ್ರೀಗಳ ಹೆಸರಿನಲ್ಲಿ ಪ್ರಶಸ್ತಿ ಹಾಗೂ ಪೌರ ಕಾರ್ಮಿಕರಿಗೆ ಕೆಲ ಕಲ್ಯಾಣ ಕಾರ್ಯಕ್ರಮ ಘೋಷಣೆ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv