ಬೆಂಗಳೂರು: ಕೋರ್ಟ್ ಚಾಟಿ ಬೀಸುವ ಮುನ್ನ ಬಿಬಿಎಂಪಿ ಲೆಕ್ಕದಲ್ಲಿದ್ದ ರಸ್ತೆ ಗುಂಡಿಗಳ ಸಂಖ್ಯೆ ಈಗ ಭಾರೀ ಏರಿಕೆಯಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಈಗ ನಗೆಪಾಟಲಿಗೆ ಗುರಿಯಾಗಿದೆ.
ರಸ್ತೆ ಗುಂಡಿಗಳ ಕುರಿತು ಲೆಕ್ಕ ನೀಡುವಂತೆ ಕೋರ್ಟ್ ಕೇಳುತ್ತಿದ್ದಂತೆ ಆತುರವಾಗಿ ಅಧಿಕಾರಿಗಳು ಕೇವಲ 52 ಅಂತಾ ತಿಳಿಸಿದ್ದರು. ಆದರೆ ಅವುಗಳ ಸಂಖ್ಯೆ ಈಗ 798ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1 ರವರೆಗೆ ಗುರುತಿಸಿದ ಹೊಸ ಪಟ್ಟಿಯ ಪ್ರಕಾರ ನಗರದಲ್ಲಿ ಹಳೇ ಗುಂಡಿ ಸೇರಿದಂತೆ ಒಟ್ಟು 850 ಗುಂಡಿಗಳಿವೆ.
ಎಲ್ಲಲ್ಲಿ ಎಷ್ಟು ಗುಂಡಿಗಳು?:
ಬೆಂಗಳೂರು ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ದಾಸರಹಳ್ಳಿ, ಮಹದೇವಪುರ ವಲಯದಲ್ಲಿ ರಸ್ತೆ ಗುಂಡಿಗಳೇ ಇಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ದಕ್ಷಿಣ ವಲಯದಲ್ಲಿ 183, ರಾಜರಾಜೇಶ್ವರಿ ನಗರ ವಲಯದಲ್ಲಿ 350, ಯಲಹಂಕ ವಲಯದಲ್ಲಿ 71, ಮುಖ್ಯ ರಸ್ತೆಗಳಲ್ಲಿ 194 ಗುಂಡಿಗಳಿವೆ ಅಂತಾ ಬಿಬಿಎಂಪಿ ಲೆಕ್ಕ ಹಾಕಿದೆ. ಈವರೆಗೆ ಕೇವಲ 314 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 536 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಸೆಪ್ಟೆಂಬರ್ 24ರೊಳಗಾಗಿ ಮುಚ್ಚಬೇಕು ಅಂತಾ ಹೈಕೋರ್ಟ್ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಬಿಬಿಎಂಪಿ ಮೇಲೆ ಛೀಮಾರಿ ಹಾಕಿದ್ದ ಹೈಕೋರ್ಟ್ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿ ಎಂದು ಚಾಟಿ ಬೀಸಿತ್ತು. ಕಾಂಟ್ರಾಕ್ಟರ್ ಮತ್ತು ಎಂಜಿನಿಯರ್ ಗಳ ಹೆಸರು ಕೊಡಿ ಎಂದು ಕೂಡ ನ್ಯಾಯಾಲಯ ಹೇಳಿತ್ತು. ಹೈ ಕೋರ್ಟ್ ಚಾಟಿಯಿಂದ ಎಚ್ಚೆತ್ತ ಬಿಬಿಎಂಪಿ ರಾತ್ರಿ ಹಗಲು, ಎನ್ನದೆ ರಸ್ತೆ ಗುಂಡಿಗಳನ್ನು ಮುಚ್ಚಲು ಹರಸಾಹಸ ಪಟ್ಟಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv