ಅನ್ಯ ಭಾಷಿಕರಿಗೆ ಬಿಬಿಎಂಪಿ, ಕನ್ನಡ ಪ್ರಾಧಿಕಾರದಿಂದ ಕನ್ನಡ ಕಲಿಸಲು ನಿರ್ಧಾರ

Public TV
1 Min Read
BBMP

ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ (Bengaluru) ಕನ್ನಡಿಗರಿಗಿಂತ ಅನ್ಯ ಭಾಷೆ ಮಾತನಾಡುವವರೇ ಹೆಚ್ಚು. ಭಾಷೆಯ ವಿಚಾರವಾಗಿ ಆಗಾಗ ಗಲಾಟೆಗಳು ಆಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ (Kannada Development Authority) ಕ್ರಮವೊಂದನ್ನು ಕೈಗೊಂಡಿದೆ.

ರಾಜಧಾನಿ ಬೆಂಗಳೂರಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ. ಅನ್ಯ ಭಾಷಿಕರೇ ತುಂಬಿರುವ ಬೆಂಗಳೂರಿನಲ್ಲಿ ಕನ್ನಡವನ್ನ ಉಳಿಸುವ, ಬೆಳೆಸುವ ಪ್ರಯತ್ನಕ್ಕೆ ಬಿಬಿಎಂಪಿ ಹಾಗೂ ಕನ್ನಡ ಪ್ರಾಧಿಕಾರ ಮುಂದಾಗಿದೆ. ನಗರದಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮಹತ್ವದ ತೀರ್ಮಾನವನ್ನು ಪಾಲಿಕೆ ಮತ್ತು ಕನ್ನಡ ಪ್ರಾಧಿಕಾರ ತೆಗೆದುಕೊಂಡಿದೆ. ಇದನ್ನೂ ಓದಿ: HAL ವಿಮಾನ ನಿಲ್ದಾಣವನ್ನು ಆದಷ್ಟು ಬೇಗ ತೆರೆಯಬೇಕು: ತೇಜಸ್ವಿ ಸೂರ್ಯ

Kannada flag

ವಾರಕ್ಕೆ ಮೂರು ದಿನ ಒಂದೊಂದು ಗಂಟೆಯಂತೆ, ತಿಂಗಳಿಗೆ 36 ಘಂಟೆಗಳಲ್ಲಿ ಕನ್ನಡವನ್ನು ಕಲಿಸಿ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ ಪಾಲಿಕೆಯ ಜೊತೆಯೂ ಕನ್ನಡ ಪ್ರಾಧಿಕಾರ ಮಾತುಕತೆ ನಡೆಸಿದೆ.

ಪ್ರತಿನಿತ್ಯ ಬಳಸುವ ಕನ್ನಡ ಪದಗಳು, ವಾಕ್ಯಗಳನ್ನು ಸರಳವಾಗಿ ಹೇಳಿಕೊಡಲಾಗುತ್ತದೆ. ಕನ್ನಡ ಕಲಿಸಲು 75 ಶಿಕ್ಷಕರನ್ನ ಹೊರಗುತ್ತಿಗೆ ಆಧಾರದಲ್ಲಿ ಪಾಲಿಕೆ ನೇಮಕ ಮಾಡಿಕೊಳ್ಳಲಿದೆ. ಕನ್ನಡ ಪ್ರಾಧಿಕಾರದಿಂದಲೂ ಖಾಸಗಿ ಕಂಪನಿ, ಇತರೆ ಜಾಗಗಳಲ್ಲಿ ಕೆಲಸ ಮಾಡುವವರಿಗೆ ಕನ್ನಡ ಕಲಿಸುವ ಕೆಲಸವನ್ನು ಮಾಡಲಾಗುತ್ತದೆ. ಆಯಾ ಕಚೇರಿ, ಕಂಪನಿಗಳಲ್ಲಿ 30 ಜನರ ತಂಡ ಕನ್ನಡವನ್ನು ಕಲಿಯುತ್ತೇವೆ ಎಂದು ಪಾಲಿಕೆ, ಪ್ರಾಧಿಕಾರಕ್ಕೆ ತಿಳಿಸಿದರೆ ಆ ಜಾಗಕ್ಕೂ ಹೋಗಿ ಶಿಕ್ಷಕರು ಹೇಳಿಕೊಡುತ್ತಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ ಅಂಕುಶ – ಸಂಜೆ 5 ಗಂಟೆಯ ನಂತರ ವಸೂಲಿ ಮಾಡುವಂತಿಲ್ಲ

ಬಿಬಿಎಂಪಿಯ ಎಂಟು ವಲಯಗಳಲ್ಲಿ, ಅನ್ಯ ಭಾಷಿಕರಿಗೆ ಕನ್ನಡ ಕಲಿಸಿಕೊಡಲು, ಕನ್ನಡ ಘಟಕಗಳನ್ನ ರಚಿಸುವಂತೆ ಪಾಲಿಕೆಗೆ ಕನ್ನಡ ಪ್ರಾಧಿಕಾರ ಮನವಿ ಮಾಡಿದೆ. ಕನ್ನಡ ಕಲಿಕೆಗೆ ಪ್ರತ್ಯೇಕ ಪಠ್ಯವನ್ನೂ ತಯಾರು ಮಾಡಿದೆ. ಇದಕ್ಕೆ ಸಮ್ಮತಿ ಸೂಚಿಸಿರುವ ಬಿಬಿಎಂಪಿ, ಈ ಕುರಿತು ತನ್ನ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವ ನಿರ್ಧಾರಕ್ಕೆ ಬಂದಿದೆ.

Share This Article