ಬೆಂಗಳೂರು: ಡೆಡ್ಲಿ ರಸ್ತೆ ಗುಂಡಿ ಮುಚ್ಚಿ ‘ಪಬ್ಲಿಕ್ ಟಿವಿ’ ಅಭಿಯಾನ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್ ಆಗಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿಯೂ ರಸ್ತೆ ಗುಂಡಿಗಳು ಹಾಗೂ ಕೆಟ್ಟ ಸ್ಥಿತಿಲ್ಲಿರುವ ಭಾಗಗಳಿಗೆ ಡಾಂಬರು ಹಾಕುವ ಕೆಲಸವನ್ನು ಮಾಡಲು ಪಾಲಿಕೆ ಸೂಚನೆ ನೀಡಿದೆ.
ನಗರದಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಲಾಗುತ್ತಿದೆ. ಅದಲ್ಲದೇ ವಾರ್ಡ್ ರಸ್ತೆಗಳಲ್ಲಿಯೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ.
ಸಂಚಾರಿ ವಿಭಾಗದಿಂದ ಗುರುತಿಸಿರುವಂತಹ, ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಬಂದಿರುವ ದೂರುಗಳು ಹಾಗೂ ಸ್ಥಳೀಯ ಅಧಿಕಾರಿಗಳು ಹೊಸದಾಗಿ ಗುರುತಿಸಿರುವ ಗುಂಡಿಗಳನ್ನು ಗುರುತಿಸಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಆಯಾ ವಲಯಗಳ ಹಿರಿಯ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವಾರ್ಡ್ ರಸ್ತೆ ಹಾಗೂ ಸಂಚಾರಿ ದಟ್ಟಣೆ ಕಡಿಮೆ ಇರುವ ಸ್ಥಳಗಳಲ್ಲಿ ಬೆಳಗಿನ ವೇಳೆಯಲ್ಲಿ ಮುಚ್ಚಲಾಗುತ್ತಿದ್ದು, ಸಂಚಾರ ದಟ್ಟಣೆ ಹೆಚ್ಚು ಇರುವ ಪ್ರಮುಖ ರಸ್ತೆಗಳಲ್ಲಿ ರಾತ್ರಿ ವೇಳೆಯಲ್ಲಿ ಮುಚ್ಚಲು ಯೋಜನೆ ರೂಪಿಸಲಾಗಿದೆ. ದೊಡ್ಡದಾದ ರಸ್ತೆ ಗುಂಡಿಗಳು ಹಾಗೂ ಕೆಟ್ಟ ಸ್ಥಿತಿಯಲ್ಲಿರುವ ಭಾಗಗಳಲ್ಲಿ ನಿಯಮಾನುಸಾರ ಡಾಂಬರೀಕಣರ ರೋಲಿಂಗ್ ಮಾಡಲಾಗುತ್ತಿದೆ.
ಮಹದೇವಪುರ ವಲಯದ ಮಾರತಹಳ್ಳಿ ರಸ್ತೆ, ಬೆಳ್ಳಂದೂರು ರಸ್ತೆ, ಕೆ.ಆರ್ ಪುರ. ದಕ್ಷಿಣ ವಲಯದ ಜಯನಗರ, ಬಿಟಿಎಂ ಲೇಔಟ್, ಈಜೀಪುರ ರಸ್ತೆ. ಬೊಮ್ಮನಹಳ್ಳಿ ವಲಯದ ಹೆಚ್.ಎಸ್.ಆರ್ ಬಡಾವಣೆ, ಮಣಿಪಾಲ್ ಕೌಂಟಿ ರಸ್ತೆ ಬೇಗೂರು ರಸ್ತೆ, ಬನ್ನೇರಘಟ್ಟ ರಸ್ತೆ, ಪೂರ್ವ ವಲಯದ ಶಿವಾಜಿನಗರ, ಸಿ.ವಿ ರಾಮನ್ ನಗರ, ಸರ್ವಜ್ಞನಗರ, ಆರ್.ಆರ್ ನಗರ ವಲಯದ ಕೋಡಿ ಪಾಳ್ಯ ರಸ್ತೆ, ಉತ್ತರಹಳ್ಳಿ ರಸ್ತೆ, ಯಲಹಂಕ ವಲಯದ ಕೊಡಿಗೆಹಳ್ಳಿ ಮುಖ್ಯ ರಸ್ತೆ, ಎನ್.ಟಿ.ಐ ಲೇಔಟ್, ಯಲಹಂಕ ಪೊಲೀಸ್ ಠಾಣೆ ರಸ್ತೆ, ದಾಸರಹಳ್ಳಿ ರಸ್ತೆ, ಅಮೃತಹಳ್ಳಿ, ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಶಾಂತಿವನ ಸಹಕಾರ ನಗರ, ದಾಸರಹಳ್ಳಿ ವಲಯದ ಚೊಕ್ಕಸಂದ್ರ, ಬಗಲಗುಂಟೆ, ಹೆಗ್ಗನಹಳ್ಳಿ, ಪಶ್ಚಿಮ ವಲಯದ ಗೋವಿಂದರಾಜನಗರ, ಮಲ್ಲೇಶ್ವರಂ, ಮೈಸುರು ರಸ್ತೆ, ಸ್ಯಾಂಕಿ ರಸ್ತೆ ಸೇರಿದಂತೆ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ಮುಚ್ಚಲಾಗಿದ್ದು, ಇಂದು ರಾತ್ರಿಯೂ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲಾಗುವುದು.
ದಾಸರಹಳ್ಳಿ ವಲಯದ ಹೆಗ್ಗನಹಳ್ಳಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ಕತ್ತರಿಸಿದ್ದ ಭಾಗಕ್ಕೆ ಕಾಂಕ್ರಿಟ್ ಹಾಕಿ ಕತ್ತರಿಸಿದ ಭಾಗವನ್ನು ಮುಚ್ಚಲಾಗಿದೆ. ಅಲ್ಲದೇ ಒಳಚರಂಡಿ ಕಾಮಗಾರಿಗಾಗಿ ಕತ್ತರಿಸದ ಭಾಗಗಳಿಗೆ ಡಾಂಬರು ಹಾಕಿ ಮುಚ್ಚಲಾಗಿದೆ.
ಅಧಿಕಾರಿಗಳಿಂದ ಪರಿಶೀಲನೆ:
ನಗರದಲ್ಲಿ ರಸ್ತೆ ಗುಂಡಿಗಳನ್ನು ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP)ದ ಪ್ರಕಾರ ರಸ್ತೆ ಗುಂಡಿಗಳನ್ನು ಮುಚ್ಚಿದರೆ ಹೆಚ್ಚು ಕಾಲ ಬಾಳಿಕೆ ಬರಲಿದೆ. ಈ ಸಂಬಂಧ ಗುಣನಿಯಂತ್ರಣ ಹಾಗೂ ಟಿವಿಸಿಸಿ ವಿಭಾಗದ ಅಧಿಕಾರಿಗಳು ರ‍್ಯಾಂಡಮ್ ಆಗಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಎಸ್.ಒ.ಪಿ ಪ್ರಕಾರ ಮುಚ್ಚದ ಕಡೆ ಅದನ್ನು ಸರಿಪಡಿಸಿಕೊಳ್ಳಲು ಗುತ್ತಿಗೆದಾರರಿಗೆ ಸೂಚನೆ ನೀಡಿರುತ್ತಾರೆ.