ಕೆಲವೇ ನಿಮಿಷಗಳಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ (BBK 12) ಅದ್ದೂರಿ ಚಾಲನೆ ಸಿಗಲಿದೆ. ಬಿಗ್‌ಹೌಸ್ ಮನೆ ಅನಾವರಣವಾಗಲಿದೆ. ಅದಕ್ಕೂ ಮುನ್ನ ಬಿಗ್‌ಬಾಸ್ ಮನೆಯ ವಿನ್ಯಾಸದ ಫೋಟೋಗಳು ವೈರಲ್ ಆಗಿದ್ದು, ಈ ಬಾರಿ ಸುದೀಪ್ (Kichcha Sudeep) ಹಿಂದೆಯೇ ಹೇಳಿರುವಂತೆ ವಿಶೇಷವಾಗಿ ಕನ್ನಡಕ್ಕೆ ಆದ್ಯತೆ ಕೊಡುವ ರೀತಿಯಲ್ಲೇ ಡಿಸೈನ್ ಆಗಿದೆ. ಈ ಬಾರಿ ದೊಡ್ಮನೆ ಸಂಪೂರ್ಣವಾಗಿ ಕನ್ನಡಮಯವಾಗಿದೆ.
ಮೈಸೂರು ಅರಮನೆ ಥೀಮ್‌ನಲ್ಲಿ ಡಿಸೈನ್ ಆಗಿರುವ ಈ ಸಲ ಬಿಗ್‌ಬಾಸ್ ಮನೆಯಲ್ಲಿ ಕನ್ನಡ ಸಂಸ್ಕೃತಿ, ಭಾಷೆ, ಪರಂಪರೆಯ ಮೇಲೆ ಬೆಳಕು ಚೆಲ್ಲಲಿದೆ. ಮನೆಯ ಹೊರಗಿನ ದೃಶ್ಯ ಅರಮನೆಯಂತೆ ಡಿಸೈನ್ ಆಗಿದ್ದರೆ, ಅಂಬಾರಿ ಹೊತ್ತ ಆನೆ, ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತ ಕಲ್ಲಿನ ರಥ, ಕರಾವಳಿ ಆಚರಣೆ ಕಂಬಳ, ಚೆನ್ನಪಟ್ಟಣದ ಬೊಂಬೆಗಳು, ಭರತನಾಟ್ಯ ಕಲೆ, ಡೊಳ್ಳುಕುಣಿತ ಕಲೆಗಳಿಂದ ಬಿಗ್‌ಬಾಸ್ ಮನೆಯ ಗೋಡೆಗಳು ಆವೃತವಾಗಿದೆ. ಹೀಗಾಗಿ ಎತ್ತ ಕಣ್ಣುಹಾಯಿಸಿದರೂ ಕನ್ನಡ ಸಂಸ್ಕೃತಿಯ ದೃಶ್ಯ ವೈಭವವೇ ಕಾಣುತ್ತೆ. ಆಧುನಿಕ ಆರ್ಕಿಟೆಕ್ಚರ್ ಶೈಲಿ ಜನಪ್ರಿಯವಾಗಿರುವ ಈ ಹೊತ್ತಲ್ಲಿ ಬಿಗ್‌ಬಾಸ್ ಸೆಟ್ ಅನ್ನ ಸಾಂಪ್ರದಾಯಿಕ ಸೊಗಡಲ್ಲಿ ನಿರ್ಮಿಸಿರುವುದು ವಿಭಿನ್ನವಾಗಿ ಗೋಚರಿಸುತ್ತಿದೆ. ಜೊತೆಗೆ ಇಡೀ ಬಿಗ್‌ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಟ್ ಅನ್ನ ಸಾಂಪ್ರದಾಯಿಕ ರೀತಿಯಲ್ಲಿ ನಿರ್ಮಿಸಿರುವ ದಾಖಲೆಯೂ ಕ್ರಿಯೇಟ್ ಆಗಿದೆ.
ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡುವಂತೆ ಬೇಡಿಕೆಯಿಟ್ಟು ಈ ಬಾರಿ ಸುದೀಪ್ ಮತ್ತೆ ನಿರೂಪಣೆ ಮಾಡಲು ಒಪ್ಪಿಕೊಂಡಿದ್ರು. ಕೆಲವು ಸಲಹೆ ಸೂಚನೆಯನ್ನ ಬಿಗ್‌ಬಾಸ್‌ನ ಎಂಡಮೋಲ್ ತಂಡಕ್ಕೆ ಸುದೀಪ್ ಕೊಟ್ಟಿದ್ದರು. ಇದರ ಅನ್ವಯ ಈ ಬಾರಿ ಹೊಸ ರೀತಿಯ ಬಿಗ್‌ಬಾಸ್ ಮನೆಯನ್ನ ಕಣ್ತುಂಬಿಕೊಳ್ಳಬಹುದು.