ಯಾದಗಿರಿ: ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ್ದ ಜಿಲ್ಲೆಯ ಜನತೆಗೆ ಮತ್ತೊಮ್ಮೆ ಪ್ರವಾಹ ಎದುರಾಗುವ ಆತಂಕ ಎದುರಾಗಿದ್ದು, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಸವಸಾಗರ ಜಲಾಶಯಕ್ಕೆ ಹರಿಯುವ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಪರಿಣಾಮ ಕೃಷ್ಣಾ ನದಿಗೆ 1,13,280 ಕ್ಯೂಸೆಕ್ ನೀಡು ಬಿಡುಗಡೆ ಮಾಡಲಾಗಿದೆ.
ಜಲಾಶಯ 33 ಗೇಟ್‍ಗಳಲ್ಲಿ ಸದ್ಯ 12 ಗೇಟ್ ಮೂಲಕ ನೀರು ಬಿಡುಗಡೆ ಮಾಡಲಾಗುತ್ತಿದೆ. ನೀರು ಬಿಡುಗಡೆಯಾಗಿರುವುದರಿಂದ ನಾಳೆ ಮುಂಜಾನೆ ವೇಳೆಗೆ ನದಿ ನೀರಿನ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ. ನದಿಪಾತ್ರದ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ಈಗಾಗಲೇ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.
Advertisement
Advertisement
ಕಳೆದ ತಿಂಗಳಷ್ಟೇ ಕೃಷ್ಣಾ ಪ್ರವಾಹಕ್ಕೆ ಜಿಲ್ಲೆ ತತ್ತರಿಸಿತ್ತು, ನದಿಪಾತ್ರ ಗ್ರಾಮಗಳು ಜಲಾವೃತಗೊಂಡಿದ್ದವು. ಅಲ್ಲದೇ ಈ ಭಾಗದ ಸಾವಿರಾರು ಎಕರೆ ಬೆಳೆ ನಾಶವಾಗಿತ್ತು. ಕೊಳ್ಳೂರು ಬ್ರಿಡ್ಜ್ ಮುಳುಗಡೆಯಾಗಿ ಕೆಲ ದಿನ ಸಂಪರ್ಕಕಡಿತವಾದರೆ, ನೀಲಕಂಠರಾಯನ ಗಡ್ಡಿ ಸೇತುವೆ ನದಿಯ ನೀರಿನ ರಭಸಕ್ಕೆ ಕೊಚ್ಚಿಹೋಗಿತ್ತು. ಕಳೆದ ಬಾರಿ ಸಂಭವಿಸಿದ ಪ್ರವಾಹ ನಷ್ಟಕ್ಕೆ ಪರಿಹಾರ ನೀಡಲು ಸರ್ವೆ ಕಾರ್ಯವನ್ನು ಜಿಲ್ಲಾಡಳಿದ ಆರಂಭಿಸಿತ್ತು. ಆದರೆ ಸದ್ಯ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ ಹಿನ್ನೆಲೆ ಮತ್ತೊಂದು ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಜ್ಜಾಗುತ್ತಿದೆ.