– ದೇವೇಗೌಡರಿಗೂ ಸದ್ಬುದ್ದಿ ಬರಲಿ, ಮಕ್ಕಳಿಗೂ ಬುದ್ಧಿ ಹೇಳಲಿ
– ನಿಂಬೆ ಹಣ್ಣು, ಶಾಸ್ತ್ರ ಕೇಳಿ ಕೆಲಸ ಮಾಡೋರು ನಮಗೆ ಟೆಕ್ನಿಕ್ ಗೊತ್ತಿಲ್ಲಾ ಅಂತಾರೆ
ತುಮಕೂರು: ಜಿಲ್ಲೆಯ ಹೇಮಾವತಿ ನಾಲೆಗೆ ಲಿಂಕಿಂಗ್ ಕೆನಾಲ್ ನಿರ್ಮಿಸಿ ಮಾಗಡಿಗೆ ನೀರು ಕೊಂಡೊಯ್ಯುವ ಯೋಜನೆ ವಿರೋಧಿಸಿ ಸಂಸದ ಜಿ.ಎಸ್.ಬಸವರಾಜು ದೇವೇಗೌಡರ ಕುಟುಂಬದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೇಮಾವತಿ ನಾಲೆಗೆ ಲಿಂಕಿಂಗ್ ಕೆನಾಲ್ ನಿರ್ಮಿಸುವ ಯೋಜನೆಯನ್ನು ವಿರೋಧಿಸಿದ್ದಾರೆ. ಸಿಎಂಗೆ ಹೇಮಾವತಿ ವಿಚಾರದಲ್ಲಿ ಎಚ್ಚರಿಕೆ ಕೊಡುತ್ತೇನೆ. ನಾವು ಕೊಡುವ ಅಲಾರಾಂ ಅವರಿಗೆ ಎಚ್ಚರಿಕೆ ಆಗಬೇಕು. ಲಿಂಕಿಂಗ್ ಕೆನಾಲ್ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ. ಎಂಜಿನಿಯರ್ ಹೇಳುವ ಮಾತನ್ನು ಕೇಳಿ. ಯಾವುದೋ ರಾಜಕಾರಣಿ ಹೇಳ್ತಾನೆ ಎಂದು ಹೇಳಿ ನೀರು ಕೊಂಡೊಯ್ಯುವ ಉಡಾಫೆ ಮಾಡಬೇಡಿ ಎಂದು ಗುಡುಗಿದರು.
ಎಂದೂ ಕೂಡಾ ತುಮಕೂರಿಗೆ ಹೇಮಾವತಿ ನೀರು ಸಂಪೂರ್ಣವಾಗಿ ಬಿಟ್ಟಿಲ್ಲ. ಸಮುದ್ರಕ್ಕೆ ನೀರು ಬಿಡುತ್ತಾರೆ ತುಮಕೂರಿಗೆ ಬಿಡುವುದಿಲ್ಲ. ತುಮಕೂರಿನವರು ಪಾಕಿಸ್ತಾನದವರಾ? ಪಾಪಿಗಳಾ ಎಂದು ಮೈತ್ರಿ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. ಲಿಂಕಿಂಗ್ ಕೆನಾಲ್ ನಿರ್ಮಿಸುವ ಯೋಜನೆಯನ್ನು ನಾವು ವಿರೋಧಿಸುತ್ತೇವೆ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರ ಕುಟುಂಬ ನೀರಾವರಿ ವಿಚಾರದಲ್ಲಿ ಅನ್ಯಾಯ ಮಾಡುತ್ತಾ ಬಂದಿದೆ. ಮಾನ್ಯ ದೇವೇಗೌಡರು ವಯೋವೃದ್ಧರು ಅವರಿಗೆ ಸದ್ಬುದ್ಧಿ ಬರಲಿ. ಮಕ್ಕಳಿಗೂ ಬುದ್ಧಿ ಹೇಳಲಿ. ಅದರಲ್ಲೂ ಸಚಿವ ರೇವಣ್ಣ ಅವರಿಗೆ ಮೊದಲು ಬುದ್ಧಿ ಹೇಳಲಿ. ಗೋರೂರು ಡ್ಯಾಂ ಬೀಗದ ಕೈ ಕೊಡಲಿ ನಾನು ನೀರುಗಂಟಿ ಕೆಲಸ ಮಾಡಿಸುತ್ತೇನೆ. ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಶಾಸ್ತ್ರ ಕೇಳಿ ಕೆಲಸ ಮಾಡೋ ಜನ ಅವರು. ನಮಗೆ ಟೆಕ್ನಿಕ್ ಗೊತ್ತಿಲ್ಲಾ ಅಂತಾರೆ ಎಂದು ವಾಗ್ದಾಳಿ ನಡೆಸಿದರು.