– ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡ್ತಿದ್ದಾರೆ ಎಂದ ಸಂಸದ
ಹಾವೇರಿ: ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ (SC ST Community) ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್ಸಿ, ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಚುನಾವಣೆಗಾಗಿ ಜಾರಿಗೆ ತಂದ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ಆ ಸಮುದಾಯಗಳಿಗೆ ಮೋಸ ಮಾಡುತ್ತಿದೆ. ರಾಜ್ಯ ಸರ್ಕಾರ ದಿವಾಳಿ ಆಗಿರೋದನ್ನು ಪ್ರತಿ ಹೆಜ್ಜೆಯಲ್ಲೂ ಪ್ರದರ್ಶನ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡುವುದರಿಂದ ಹಿಡಿದು ಎಲ್ಲಾ ದರ ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಅನುದಾನವನ್ನು ವರ್ಗಾಯಿಸುತ್ತಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಬಳಕೆ ಆಗಬೇಕಿದ್ದ 14,000 ಕೋಟಿ ರೂ. ಅನುದಾನ, ಗ್ಯಾರಂಟಿಗಳಿಗೆ ಹೋಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಎಸ್ಟಿ, ಎಸ್ಟಿ ಸಮುದಾಯದ ಜನರಿಗೆ ಗ್ಯಾರಂಟಿ ಮೂಲಕ ಅನುಕೂಲ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದ್ರೆ ವೋಟಿಗಾಗಿ ಮಾಡಿದ ಯೋಜನೆಗಳಿಗೆ ಆ ಸಮುದಾಯಕ್ಕೆ ಸೇರಬೇಕಿರುವ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಕಾನೂನು ಉಲ್ಲಂಘನೆಯೂ ಆಗಿದೆ. ಸರ್ಕಾರ ಸುಭದ್ರವಾಗಿದ್ದಿದ್ದರೇ ಅವರ ಹಣಕ್ಕೆ ಯಾಕೆ ಕೈ ಹಾಕಿದ್ದಾರೆ? ವಾಲ್ಮೀಕಿ ನಿಗಮದ ಹಣ ಸಹ ಲೂಟಿ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: SCSP – TSP ಯೋಜನೆಯ 14 ಸಾವಿರ ಕೋಟಿ ಹಣ ಕಾಂಗ್ರೆಸ್ ಗ್ಯಾರಂಟಿಗೆ ಬಳಕೆ
ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ:
ಅಲ್ಲದೇ ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಡೆಂಗ್ಯೂ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುತ್ತಿದೆ. ಡೆಂಗ್ಯೂ ರೋಗಿಗಳ ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ. ಹಾವೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಜನರು ದಾವಣಗೆರೆ, ಹುಬ್ಬಳ್ಳಿಗೆ ಹೋಗುತ್ತಿದ್ದಾರೆ, ಕೆಲವರು ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಆದ್ರೆ ಇದೆಲ್ಲವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂನಿಂದ ಜನ ಸಾಯ್ತಿದ್ರೆ, ಸಚಿವರು ಸ್ವಿಮ್ಮಿಂಗ್ ಪೂಲ್‍ನಲ್ಲಿದ್ದಾರೆ: ಛಲವಾದಿ ನಾರಾಯಣಸ್ವಾಮಿ ಕಿಡಿ
ಡೆಂಗ್ಯೂಗೆ ಹಾವೇರಿಯಲ್ಲೇ ಅತಿಹೆಚ್ಚು ಸಾವು:
ಡೆಂಗ್ಯೂ ಹೆಚ್ಚಾಗುತ್ತಿದೆ ಅಂತ ನಾನು ಮೊದಲೇ ಹೇಳಿದ್ದೆ. ಸರ್ಕಾರ ಯಾವ್ದೇ ವ್ಯವಸ್ಥೆ ಮಾಡಿಕೊಳ್ಳದೇ ಇದ್ದುದರಿಂದ ರೋಗಿಗಳು ಪರದಾಡುತ್ತಿದ್ದಾರೆ. ಸಾವು ನೋವು ಹೆಚ್ಚಾಗುತ್ತಿವೆ. ಇಡೀ ರಾಜ್ಯದಲ್ಲಿ ಹಾವೇರಿಯಲ್ಲೇ ಡೆಂಗ್ಯೂಗೆ ಅತಿಹೆಚ್ಚು ಸಾವು ಸಂಭವಿಸಿದೆ. ಕೂಡಲೇ ಡಿಹೆಚ್‌ಒ ವರ್ಗಾವಣೆ ಮಾಡಬೇಕು. ಸಮರ್ಥ ಆರೋಗ್ಯಾಧಿಕಾರಿಯನ್ನ ನಿಯೋಜಿಸಬೇಕು. ಆಶಾ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ಜಾಗೃತಿ ಮೂಡಿಸಬೇಕು, ಪ್ರತಿಯೊಬ್ಬರಿಗೂ ಚಿಕಿತ್ಸೆ ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರು-ಭದ್ರತಾಪಡೆಗಳ ನಡುವೆ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ
ಮುಂದಿನ ವಾರದಲ್ಲೇ NH ಕಾಮಗಾರಿ ಕುರಿತು ಚರ್ಚೆ:
ನಾನು ಸಂಸತ್ ಅಧಿವೇಶನಕ್ಕೆ ತೆರಳಿದ್ದಾಗ ಹಾವೇರಿ ವಿಭಾಗದಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಾತನಾಡಿದ್ದೇನೆ. ಈ ಬಗ್ಗೆ ಚರ್ಚಿಸಲು ಅವರು ಮುಂದಿನ ವಾರ ವಿಶೇಷ ಸಮಯ ನೀಡಿದ್ದಾರೆ. ಆಮೆಗತಿಯಲ್ಲಿ ನಡೆಯುತ್ತಿರುವ NH-4 ಕಾಮಗಾರಿ ಹಾಗೂ ಹಾನಗಲ್, ಶಿಗ್ಗಾಂವಿ, ಸವಣೂರು, ಲಕ್ಷ್ಮೇಶ್ವರ, ಗದಗ ಮಾರ್ಗವಾಗಿ ಹಾಯ್ದು ಹೋಗುವ ಇಳಕಲ್-ಕಾರವಾರ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ, ರಿಂಗ್ ರಸ್ತೆಗಳ ನಿರ್ಮಾಣ, ಆರ್‌ಒಬಿ ನಿರ್ಮಾಣ ಮಾಡುವ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದೇನೆ. ಈ ಎಲ್ಲ ವಿಷಯಗಳ ಕುರಿತು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅಗತ್ಯ ಸಹಕಾರ ನೀಡುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ.
ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ:
ಇನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆಗೆ ಶಿವಮೊಗ್ಗ ಶಿಕಾರಿಪುರ ಮಾರ್ಗವಾಗಿ ರಾಣೆಬೆನ್ನೂರು ಹೊಸ ರೈಲು ಮಾರ್ಗದ ಕುರಿತು ಚರ್ಚೆ ನಡೆಸಲಾಗಿದೆ. ಇದರ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆಗೆ ಪತ್ನಿ ಸ್ಪರ್ಧೆ ವದಂತಿಗೆ ಡಾ. ಮಂಜುನಾಥ್ ಸ್ಪಷ್ಟನೆ
ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಧನ್ಯವಾದ ಹೇಳ್ತೀನಿ:
ಶಿಗ್ಗಾಂವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಪಕ್ಷವು ಸಮೀಕ್ಷೆ ಮಾಡಿಸಿದ ನಂತರ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತದೆ. ನನ್ನ ಮೇಲೆ ಶಿಗ್ಗಾವಿ ಜನರ ಋಣ ಇದೆ. ರಾಜಕೀಯವಾಗಿ ಬೆಳೆಯಲು ಮಹಾ ಜನತೆಯ ಆಶೀರ್ವಾದ ಇದೆ. ಇದಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ. ಜನತೆಗೆ ಕೃತಜ್ಞತೆ ಹೇಳಬೇಕು ಅಂತ ಇದೆ. ರಾಜಕೀಯ ಮೀರಿ ಈ ಕ್ಷೇತ್ರದ ಜನರ ಜೊತೆಗೆ ಅನೋನ್ಯತೆ ಇದೆ. ಬರುವ ಜುಲೈ 12ರಿಂದ ಹಂತ ಹಂತವಾಗಿ ಧನ್ಯವಾದ ಯಾತ್ರೆ ಮಾಡುತ್ತೇನೆ. ಪ್ರತಿ ಗ್ರಾಮದ ಜನರನ್ನು ಭೇಟಿಯಾಗಿ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.