ಧಾರವಾಡ: ಮಕ್ಕಳ ಮನಸ್ಸು ತುಂಬಾ ಮೃದುವಾಗಿದೆ. ವಿವಾದದಿಂದ ಮಕ್ಕಳ ಭವಿಷ್ಯಕ್ಕೆ ಕೆಟ್ಟ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ತಂದೆ-ತಾಯಿ ಮತ್ತು ರಾಜಕೀಯ ಪಕ್ಷಗಳು ವಿಚಾರ ಮಾಡಬೇಕಿದೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಅಲ್ಲಾ ಹು ಅಕ್ಬರ್ ಅಂತಾರೆ, ಈ ಕಡೆ ಜೈ ಶ್ರೀರಾಮ ಅಂತಾರೆ, ಮಕ್ಕಳ ಮಧ್ಯೆ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಇದು ಮುಂದುವರಿದರೆ ಕಾಲೇಜ್‍ಗಳಲ್ಲಿ ಹೆಣಗಳು ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಕ್ತಪಾತವೂ ಆಗಬಹುದು. ಎಲ್ಲ ರಾಜಕೀಯ ವ್ಯವಸ್ಥೆ ಬಿಟ್ಟು ಹಿಜಬ್ ಕೇಸರಿ ವಿವಾದ ಬಗೆ ಹರಿಸಬೇಕು ಎಂದರು. ಇದನ್ನೂ ಓದಿ: ಪಂಜಾಬ್ ಚುನಾವಣೆ – ಸೋದರ ಮಾವನ ಪರ ಕೇಜ್ರಿವಾಲ್ ಪತ್ನಿ ಪ್ರಚಾರ!
ಸರ್ಕಾರ ಕೂಡಲೇ ವಿರೋಧ ಪಕ್ಷ ಮತ್ತು ಪಾಲಕರ ಸಭೆ ಕರೆಯಬೇಕು. ಇದು ಪಾರ್ಲಿಮೆಂಟ್‍ಗೂ ಹೋಗಿದೆ. ಹೀಗಾದರೆ ರಾಜ್ಯದ ಮರ್ಯಾದೆ ಏನಾಗುತ್ತದೆ, ಸರ್ಕಾರ ಅಧಿವೇಶನ ಸಹ ನಿಲ್ಲಿಸಿ ಈ ಕಡೆ ನೋಡಬೇಕು. ಇದರಲ್ಲಿ ರಾಜಕೀಯ ಬೆರಸಬಾರದು. ಪಾಕಿಸ್ತಾನಕ್ಕೆ ಇದೇ ಬೇಕಲ್ವಾ, ಇಂತಹುದೇ ಅವರಿಗೆ ಬೇಕು ಎಂದರು.
ಮಕ್ಕಳು ಮತ್ತು ಪಾಲಕರ ಮನಸ್ಸು ಕ್ಲಿಯರ್ ಮಾಡಬೇಕಿದೆ. ಬೇರೆ, ಬೇರೆ ಜಾತಿ ಮೇಲೆ ತೆಗೆದುಕೊಂಡಲ್ಲಿ ನಾಳೆ ಬೆಂಕಿ ಹತ್ತಿ ಉರಿಯುತ್ತದೆ. ಕೋರ್ಟ್‍ಗೂ ಸಹ ನಾವು ಇತ್ಯರ್ಥ ಮಾಡಿಕೊಳ್ಳುತ್ತೇವೆ ಅಂತ ಸರ್ಕಾರ ಹೇಳಬೇಕು. ರಾಜಕೀಯ ನಾಯಕರು ಹೇಳಿಕೆಗಳನ್ನು ನಿಲ್ಲಿಸಬೇಕು. ಮಕ್ಕಳ ಭವಿಷ್ಯಕ್ಕೆ ನಾವೇ ಕೊಳ್ಳಿ ಇಟ್ಟರೆ ಹೇಗೆ? ಶಾಸಕರು ಇರುವುದು ಏತಕ್ಕೆ? ನಾಲ್ಕು ಮಂದಿಗೆ ಒಳ್ಳೆದಾಗಲಿ ಅಂತ ಆರಿಸಿ ಕಳುಹಿಸಿದ್ದಾರೆ. ಭಾಷಣ ಬೇಕಾದರೆ ಎಲೆಕ್ಷನ್‍ದಲ್ಲಿ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 7.47 ಕೋಟಿ ರೂ.ಗೆ ವಿಮೆ ಮಾಡಿಸಿದ್ದ ಪೇಂಟಿಂಗ್ ನಾಶ ಮಾಡಿದ ಸೆಕ್ಯೂರಿಟಿ!
ಬಿಕನಿ ಬಗ್ಗೆ ಪ್ರಿಯಂಕಾ ಗಾಂಧಿ ಟ್ವೀಟ್: ಇದು ಎಲ್ಲವೂ ರಾಜಕೀಯ, ಅವರವರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಯಾವ ಬಟ್ಟೆ ಹಾಕಬೇಕು ಅಂತಾ ತಾಯಿ-ತಂದೆ ಕಲಿಸಬೇಕು. ತಾಯಿ ಸ್ಥಾನದಲ್ಲಿಯೂ ಪ್ರಿಯಾಂಕಾ ಇದ್ದಾರೆ. ಅಂಥವರು ಬಿಕನಿ ಬಗ್ಗೆ ಹೇಳುವುದು ತಪ್ಪು. ಹಕ್ಕು ಎಲ್ಲರಿಗೂ ಇದೆ. ಯಾವ, ಯಾವ ಜಾಗಕ್ಕೆ ಏನಿರಬೇಕೋ ಅದು ಇರಬೇಕು. ಸಮುದ್ರ ದಂಡೆಯಲ್ಲಿ ಬಿಕನಿ ಹಾಕಿಕೊಂಡರೆ ಯಾರು ಕೇಳುತ್ತಾರೆ, ಕಾಲೇಜ್‍ಗೆ ಬಿಕನಿ ಹಾಕಿಕೊಂಡು ಹೋಗಿ ಅಂದರೆ ಹೇಗೆ? ಯಾರನ್ನು ಓಲೈಸುವ ಕೆಲಸ ಮಾಡಬಾರದು ಎಂದು ಹೇಳಿದರು.