ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಬಹಳ ಸರಳ ಎಂದು ಮೋದಿ ಸರ್ಕಾರ ತಿಳಿದುಕೊಂಡಿತ್ತು, ಹೀಗಾಗಿ ಜನರ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಕೆಲಸಕ್ಕೆ ನರೇಂದ್ರ ಮೋದಿ ಸರ್ಕಾರ ಹೋಗಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದರೆ.
ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ಕಾನೂನು ತರುವ ಮೊದಲು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ನಮ್ಮನ್ನು ಯಾರೂ ಕೇಳುವವರಿಲ್ಲ ಎನ್ನುವ ಭಾವನೆಯಲ್ಲಿದೆ. ಹೀಗಾಗಿ ಮನಬಂದಂತೆ ಕಾನೂನು ರೂಪಿಸಿದೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇದೆ. ಇಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷದ ರಾಜಕಾರಣ ಕಾಣುತ್ತಿದೆ. ಪ್ರತಿಭಟನೆ ಮಾಡುವುದು ಜನ್ಮಸಿದ್ಧ ಹಕ್ಕು, ಪ್ರತಿಭಟಿಸುವ ಹಕ್ಕು ಹತ್ತಿಕ್ಕುವುದು ಡಿಕ್ಟೆರ್‍ಶಿಪ್ ಆಗುತ್ತದೆ. ಆದರೆ ಯಾರಾದರೂ ಕಾನೂನು ಮೀರಿ ನಡೆದರೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಹೋರಾಟ ಮಾಡುವುದೇ ಬೇಡ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಹೋರಾಟ ಮಾಡುವುದೇ ಬೇಡ ಎನ್ನುವವವರು ನಾಳೆ ಬದುಕುವುದು ಬೇಡ, ಊಟ ಮಾಡುವುದು ಬೇಡ, ನೀರು ಕುಡಿಯುವುದು ಬೇಡ ಎಂದೂ ಹೇಳಬಹುದು ಎಂದು ಹೊರಟ್ಟಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.