ಹುಬ್ಬಳ್ಳಿ: ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಳಿಗಾಲದ ಅಧಿವೇಶನದ ದಿನಾಂಕ ಘೋಷಣೆ ಮಾಡುವ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬರೆದ ಪತ್ರದ ಕುರಿತು ಹುಬ್ಬಳ್ಳಿಯಲ್ಲಿ ಬುಧವಾರ ಪ್ರತಿಕ್ರಿಯಿಸಿದ ಸಿಎಂ, ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ನಿಶ್ಚಯಿಸಲಾಗಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ. ೮ರಂದು ಸಚಿವ ಸಂಪುಟ ಸಭೆ ಇದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ದಿನಾಂಕ ಘೋಷಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಸಿರು ಪಟಾಕಿ ದರ ಭಾರೀ ಏರಿಕೆ
ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ 25 ಸದಸ್ಯರು 2022ರ ಜನವರಿ 5 ರಂದು ನಿವೃತ್ತಿ ಹೊಂದಲಿದ್ದಾರೆ. ಈ ಬಾರಿಯ ಅಧಿವೇಶನವನ್ನು ತಾವು ಸೂಚಿಸಿದ ಅವಧಿಯಲ್ಲಿ ನಡೆಸುವುದರಿಂದ ನಿವೃತ್ತಿ ಹೊಂದಲಿರುವ 25 ಸದಸ್ಯರಿಗೆ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಆದಷ್ಟು ಬೇಗನೆ ದಿನಾಂಕ ನಿಗದಿಪಡಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು
ಈ ಹಿನ್ನೆಲೆಯಲ್ಲಿ ೮ರಂದು ನಡೆಯುವ ಸಂಪುಟ ಸಭೆಯಲ್ಲಿ ಅಧಿವೇಶನ ದಿನಾಂಕ ನಿಗದಿಪಡಿಸುವುದಾಗಿ ಸಿಎಂ ತಿಳಿಸಿದ್ದಾರೆ.