Bengaluru CityDistrictsKarnatakaLatestMain Post

ಶ್ರೀರಾಮಚಂದ್ರನಿಗೂ ಟೀಕೆಗಳು ತಪ್ಪಲಿಲ್ಲ: ಬೊಮ್ಮಾಯಿ

ಬೆಂಗಳೂರು: ಟೀಕೆ ಟಿಪ್ಪಣಿಗಳು ಬಂದರೂ ಕರ್ತವ್ಯದಿಂದ ವಿಮುಖರಾಗಬಾರದು. ಕರ್ತವ್ಯದಲ್ಲಿ ತಲ್ಲೀನರಾದವರಿಗೆ ಯಾವುದೂ ಬಾಧಕವಾಗುವುದಿಲ್ಲ. ಶ್ರೀರಾಮಚಂದ್ರನಿಗೂ ಟೀಕೆಗಳು ತಪ್ಪಲಿಲ್ಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಮಿತ್ರ ಸಹಾಯ ವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸಂದೇಶ ರವಾನೆ ಮಾಡಿದರು.

ಕರ್ತವ್ಯ ಮಾಡದೆ ಗತಿಸಿ ಹೋದ ಕಾಲ ಮರಳಿ ಬರುವುದಿಲ್ಲ. ಅದರ ಬಗ್ಗೆ ಮಾತನಾಡುವುದರಿಂದ ಪ್ರಯೋಜನವಿಲ್ಲ. ಪ್ರಸ್ತುತವಾಗಿರುವ ನಮ್ಮ ಗುರಿ ಸಾಧನೆಯ ಛಲ ಮುಖ್ಯ. ವರ್ತಮಾನದಲ್ಲಿ ಮಾಡುವ ಕೆಲಸ ಭವಿಷ್ಯ ನಿರ್ಮಿಸುತ್ತದೆ. ಸಮಯಕ್ಕೆ ತಕ್ಕ ಹಾಗೆ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಸರಿಯಾದ ಮಾರ್ಗಸೂಚಿಗಳು ಇಲ್ಲದೆ ಕೆಲವು ಕಾರ್ಯಕ್ರಮಗಳು ಮುಟ್ಟುವುದಿಲ್ಲ ಎಂದರು.

ದೀನ ದಲಿತರಿಗೆ ನೆರವು: ದೀನದಲಿತರ ಶ್ರೇಯೋಭಿವೃದ್ಧಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವುದು ನನಗೆ ಮುಖ್ಯ. ಅವರು ಸ್ವಾಭಿಮಾನದ ಬದುಕು ನಡೆಸುವುದು ಬಹಳ ಮುಖ್ಯ. ಇದರಲ್ಲಿ ಯಾವುದೇ ರೀತಿಯ ರಾಜಿಯೂ ಇಲ್ಲ ಹಾಗೂ ಮುಲಾಜೂ ಇಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕಾನೂನುಗಳಿವೆ, ಆ ಪ್ರಕಾರ ನಡೆದುಕೊಳ್ಳಲು ಏನು ತೊಂದರೆ? ನೀವು ಸರಿಯಾಗಿ ಕೆಲಸ ಮಾಡಿದರೆ ಇಡೀ ಕರ್ನಾಟಕದ ದೀನದಲಿತರು ಸಂತೋಷ ಪಡುತ್ತಾರೆ. ಅವರ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕ ಬರುತ್ತವೆ. ಆ ಸಂಕಲ್ಪವನ್ನು ತೊಡಬೇಕು. ನೀವು ಕೇವಲ ನಿಮ್ಮ ಕೆಲಸ ಮಾಡುವುದಷ್ಟೇ ಅಲ್ಲ, ಅಧಿಕಾರವನ್ನು ಜನರ ಪರವಾಗಿ ಬಳಕೆ ಮಾಡುವ ಕರ್ತವ್ಯ ನಿಮ್ಮದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಲು ಸಾಮಥ್ರ್ಯ ಮತ್ತು ಬದ್ಧತೆ ಅಗತ್ಯ. ಜನ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಬೇಕು ಹಾಗೂ ಅವನ ಜೀವನದ ಗುಣಮಟ್ಟವನ್ನು ಹೆಚ್ಚಿಸಬೇಕು ಎನ್ನುವ ಕಲ್ಪನೆ ಸಾಕಾರಗೊಳ್ಳುವ ಮೊದಲು ಇಲಾಖೆಗೆ ಸಾಮಥ್ರ್ಯ ಇರಬೇಕು. ಅದರ ಜೊತೆಗೆ ಬದ್ಧತೆ ಇರಬೇಕು ಎಂದು ತಿಳಿಸಿದರು.

ಬದಲಾವಣೆಯ ಪರ್ವ: ಆಡಳಿತದ ವ್ಯಾಖ್ಯಾನ ಬದಲಾಗಿದೆ. ಪ್ರಜಾಪ್ರಭುತ್ವದ ಆಕಾಂಕ್ಷೆಗಳು ಬದಲಾಗಿವೆ. ಬದಲಾವಣೆಯ ಈ ಪರ್ವ ಕಾಲದಲ್ಲಿ ನಾವೂ ಕೂಡ ಬದಲಾವಣೆಗೆ ಹೊಂದಿಕೊಂಡರೆ ಮಾತ್ರ ಪ್ರಸ್ತುತವಾಗುತ್ತೇವೆ. ಪ್ರಸ್ತುತವಾಗುವುದರ ಜೊತೆಗೆ ನಮ್ಮನ್ನು ನಂಬಿದ ಜನರಿಗೆ ನ್ಯಾಯವನ್ನು ಕೊಡಲು ಸಾಧ್ಯ. ಇದನ್ನು ನಾವು ಮಾಡದಿದ್ದರೆ, ಎಲ್ಲವೂ ಇದ್ದು ಇಲ್ಲದಂತಾಗುತ್ತದೆ. ಸರ್ಕಾರ ಪ್ರತಿವರ್ಷ ಅನುದಾನವನ್ನು ಕೊಡುತ್ತಿರುತ್ತದೆ. ಅದರ ಸದುಪಯೋಗವಾಗವು ಸರಿಯಾದ ಸಮಯದಲ್ಲಿ ಆಗಬೇಕು. ಆಗ ಮಾತ್ರ ಕಾರ್ಯಕ್ರಮದ ಉದ್ದೇಶ ಈಡೇರುತ್ತದೆ ಎಂದರು.

ಕಷ್ಟದಲ್ಲಿರುವವರಿಗೆ, ಬಡವರಿಗೆ, ಅವಮಾನಕ್ಕೆ ಒಳಗಾದವರಿಗೆ, ತುಳಿತಕ್ಕೆ ಒಳಗಾದವರಿಗೆ ಕೈ ಹಿಡಿದು ಮೇಲೆತ್ತುವ ಸೌಭಾಗ್ಯ ಒದಗಿದೆ. ಇದನ್ನು ನಾನು ಪ್ರಾಮಾಣಿಕವಾಗಿ ಮಾಡಬೇಕು ಎನ್ನುವ ಬದ್ಧತೆ ಬಂದರೆ ಈ ಸಮಾಜ ಖಂಡಿತ ಉದ್ಧಾರವಾಗುತ್ತದೆ. ನೀವು ನಿಮ್ಮ ಕರ್ತವ್ಯ, ಸರ್ಕಾರದ ಧ್ಯೇಯೋದ್ದೇಶಗಳು ಹಾಗೂ ಕಟ್ಟ ಕಡೆಯ ಮನುಷ್ಯನ ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಅಸಡ್ಡೆ ಒಪ್ಪಲು ಸಾಧ್ಯವಿಲ್ಲ: ವಿಳಂಬ ಧೋರಣೆ, ಅಸಡ್ಡೆ ಅಸಹಕಾರವನ್ನು ಎಂದೂ ಒಪ್ಪಲು ಸಾಧ್ಯವಿಲ್ಲ. ಅನುದಾನ ಒದಗಿಸಿದರೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತದೆ. ನಮ್ಮ ಸರ್ಕಾರ ವಿಳಂಬ ಧೋರಣೆ, ಅಸಡ್ಡೆ, ಅಸಹಕಾರವನ್ನು ಎಂದೂ ಒಪ್ಪಲು ಸಾಧ್ಯವಿಲ್ಲ ಎಂದು ವಾರ್ನಿಂಗ್ ನೀಡಿದರು.

ದಾಖಲೆಗಳ ಸರಳೀಕರಣವಾಗಬೇಕು. ಇಲಾಖೆಗಳ ಸಮನ್ವಯ, ನೌಕರರಲ್ಲಿ ತಾಳಮೇಳ ಇವೆಲ್ಲವುಗಳ ಆಮೂಲಾಗ್ರ ಬದಲಾವಣೆಯ ಅವಶ್ಯಕತೆ ಇದೆ. ಅತ್ಯಂತ ಸರಳವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಬದಲಾವಣೆ ಕಾಲ ಪ್ರಾರಂಭವಾಗಿದೆ, ಸಬೂಬುಗಳ ಕಾಲ ಮುಗಿದಿದೆ: ಬೊಮ್ಮಾಯಿ

ಸ್ವಾತಂತ್ರ್ಯ ಬಂದ ಮೇಲೆ 75 ವರ್ಷಗಳಾಗಿವೆ. ಸರ್ಕಾರದ ಸಹಾಯವಿಲ್ಲದೆ ಅವರು ಏನೂ ಮಾಡಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಅವರಿಗೆ ನ್ಯಾಯ ಸಿಕ್ಕಿರುವುದಿಲ್ಲ. ಸರ್ಕಾರವೇ ನ್ಯಾಯ ಕೊಡಬೇಕು. ನ್ಯಾಯ ಕೊಡುವುದಷ್ಟೇ ಅಲ್ಲ ಈ ಸಂದೇಶವನ್ನು ಕೊಡಬೇಕು. ನಮ್ಮ ಸರ್ಕಾರ ವಿಳಂಬ ಧೋರಣೆ, ಅಸಡ್ಡೆ ಅಸಹಕಾರವನ್ನು ಎಂದೂ ಒಪ್ಪಲು ಸಾಧ್ಯವಿಲ್ಲ ಎಂದರು.

ಈ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರಾಗಿ ಕೆಲಸ ಮಾಡುವುದು ಸುಲಭವಲ್ಲ. ಬಹಳಷ್ಟು ಬಾರಿ ಕ್ಲಿಷ್ಟಕರ ಸಂದರ್ಭಗಳು ಬರುತ್ತವೆ. ಸ್ಪಷ್ಟವಾದ ವಿಚಾರಗಳಿಲ್ಲದ ನಾಯಕತ್ವದಿಂದ ಈ ಸಂದರ್ಭಗಳು ಬರುತ್ತವೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಾಯಕತ್ವವಾಗಲಿ, ವ್ಯವಸ್ಥೆಯಾಗಲಿ ಉದ್ಧಾರ ಮಾಡಲು ಸಾಧ್ಯವಿಲ್ಲ. ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಅನುಮಾನ, ಅವಕಾಶವಿಲ್ಲ. ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗುವುದು. ಅದರಂತೆ ಕೆಲಸ ಮಾಡಬೇಕು. ನಿಮ್ಮನ್ನು ಸಂಪೂರ್ಣವಾಗಿ ಸಂರಕ್ಷಿಸುವುದು ನಮ್ಮ ಕೆಲಸ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಪ್ರಚಾರದ ಹುಚ್ಚು: ಸುನಿಲ್ ಕುಮಾರ್ ತಿರುಗೇಟು

ಜನ ಹತಾಶರಾಗಬಾರದು. ಅವರು ಬಂದಾಗ ಸ್ವಲ್ಪ ಕೋಪದಲ್ಲಿ ಮಾತನಾಡುತ್ತಾರೆ. ನಾವು ಸಮಸ್ಯೆಗಳನ್ನು ಚರ್ಚೆ ಮಾಡುತ್ತೇವೆ. ಸಮುದಾಯಗಳು ಸಮಸ್ಯೆಗಳೊಂದಿಗೆ ಬದುಕುತ್ತಾರೆ. ಸಮಸ್ಯೆಯನ್ನು ಚರ್ಚೆ ಮಾಡುವುದಕ್ಕೂ ಶ್ರಮಪಟ್ಟು ಕೆಲಸ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದರು.

Leave a Reply

Your email address will not be published.

Back to top button