ಚಿತ್ರದುರ್ಗ: ಈ ಬಾರಿ ಸಂಪುಟ ವಿಸ್ತರಣೆಯಾಗಲಿದೆಯೋ, ಪುನರ್ ರಚನೆಯೋ ಕಾದು ನೋಡಿ ಎಂದು ಹೊಸದುರ್ಗ ಹೆಲಿಪ್ಯಾಡ್‍ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ಚಿತ್ರದುರ್ಗ (Chitradurga) ಜಿಲ್ಲೆಯ ಹೊಸದುರ್ಗ ಪಟ್ಟಣದ ತಾಲೂಕು ಕ್ರೀಡಾಂಗಣದ ಹೆಲಿಪ್ಯಾಡ್‍ನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಸನ್ನಿವೇಶದಿಂದ ಚಿತ್ರದುರ್ಗದ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನಕ್ಕೆ ಆದ್ಯತೆ ಸಿಕ್ಕಿಲ್ಲ. ಈ ಬಾರಿ ಅವಕಾಶ ಸಿಗಲಿದೆ. ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ದೆಹಲಿಗೆ (NewDelhi) ತೆರಳುತ್ತೇನೆ. ಹಾಗೆಯೇ ಕಳಂಕಿತ ಶಾಸಕರು ಎನಿಸಿರುವ ರಮೇಶ್ ಜಾರಕಿಹೊಳಿ (Ramesh Jarkiholi) ಹಾಗೂ ಕೆ.ಎಸ್. ಈಶ್ವರಪ್ಪಗೆ (KS Eshwarappa) ಸಚಿವ ಸ್ಥಾನ ನೀಡುವ ಬಗ್ಗೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಪ್ರಾಮುಖ್ಯ ಯೋಜನೆಯಾಗಿ ಪಿಐಬಿ (ಸಾರ್ವಜನಿಕ ಬಂಡವಾಳ ಹೂಡಿಕೆ ಮಂಡಳಿ)ಯಲ್ಲಿ ಅನುಮೋದನೆ ನೀಡಲಾಗಿದೆ. ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಬಾಕಿ ಇದೆ. ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಲಿದೆ ಎಂದು ಹೇಳಿದರು.
ಕೇಂದ್ರ ಜಲಸಂಪನ್ಮೂಲ ಸಚಿವರು ಯೋಜನೆ ಕುರಿತು ಕಾರ್ಯೋನ್ಮುಖರಾಗಿದ್ದಾರೆ. ವೈಯಕ್ತಿಕವಾಗಿ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಇದರಿಂದಾಗಿ ಯೋಜನೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ನೆರವು ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗ ಭಾಗದ ಜನರ ಬಹುದಿನದ ಬೇಡಿಕೆ ತುಮಕೂರು- ದಾವಣಗೆರೆ ನೇರ ರೈಲು ಮಾರ್ಗದ ಯೋಜನೆಯ ಅನುಷ್ಠಾನಕ್ಕೆ ಕೆಲವು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಬಾಕಿಯಿದೆ. ಭೂ ಸ್ವಾಧೀನ ಪ್ರಕ್ರಿಯೆ ಶೀಘ್ರವಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಭೂ ಸ್ವಾಧೀನಕ್ಕೆ ಅಗತ್ಯ ಇರುವ 100 ಕೋಟಿ ರೂಪಾಯಿಗಳನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು. ಇದನ್ನೂ ಓದಿ: ಜನಪ್ರತಿನಿಧಿಗಳೇ ಬದುಕಿದ್ದೀರಾ? ಅಧಿಕಾರಿಗಳೇ ಇತ್ತ ಗಮನಿಸಿ – ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ
ಕೃಷಿ ಸಚಿವ ಬಿ.ಸಿ.ಪಾಟೀಲ್, ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷರಾದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಸೇರಿದಂತೆ ಇತರರಿದ್ದರು. ಇದನ್ನೂ ಓದಿ: ರಾಷ್ಟ್ರಧ್ವಜ ಹಿಡಿದು ರಾಹುಲ್ ಗಾಂಧಿ 100 ಮೀ. ಓಟ – ಬ್ಯಾಂಡ್ ಬಾರಿಸುತ್ತ ನಡೆದ ಡಿಕೆಶಿ