40% ಅರೋಪ – ಉಪ ಚುನಾವಣೆ ಫಲಿತಾಂಶದ ನಂತರ ಮಾತಾಡ್ತೇನೆ
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy) ಅವರ ಕುರಿತು ವಸತಿ ಸಚಿವ ಜಮೀರ್ ಅಹಮದ್ (Zameer Ahmed Khan) ನೀಡಿರುವ ಹೇಳಿಕೆ ನಾಗರೀಕ ಸಮಾಜ ಒಪ್ಪುವಂಥದ್ದಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಒಂದು ಗೌರವ ಇದ್ದೇ ಇರುತ್ತದೆ. ಶ್ರೀಮಂತ ಇರಲಿ, ಬಡವ ಇರಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ. ಹಾಗಾಗಿ ಯಾರೂ ಯಾರನ್ನೂ ಕೊಂಡುಕಳ್ಳಲು ಆಗುವುದಿಲ್ಲ. ಇದರ ಅರಿವು ಇರುವವರು ಯಾರೂ ಹೀಗೆ ಮಾತನಾಡುವುದಿಲ್ಲ ಎಂದಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ 40% ಕಮಿಷನ್ ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿಯಲಿ ಉಲ್ಲೇಖ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಆ ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದ ನಂತರ ನಾನು ಮಾತನಾಡುತ್ತೇನೆ. ಅಲ್ಲೀವರೆಗೂ ನಾನು ಮಾತನಾಡುವುದಿಲ್ಲ ಎಂದಿದ್ದಾರೆ.
40% ಕಮಿಷನ್ ಆರೋಪದ ಬಗ್ಗೆ ಯಾವುದು ಸತ್ಯ ಯಾವುದು ಅಸತ್ಯ ಎನ್ನುವ ಬಗ್ಗೆ ನ.23ರ ನಂತರ, ಉಪ ಚುನಾವಣಾ ಫಲಿತಾಂಶ ಬಂದ ನಂತರವೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.