ದಾವಣಗೆರೆ: ವಿರೋಧ ಪಕ್ಷಗಳ ನಾಯಕರಿಗೆ ಕನಸಿನಲ್ಲೂ ಯಡಿಯೂರಪ್ಪ ಬರ್ತಾರೆ, ಅದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಯಿ ವ್ಯಂಗ್ಯವಾಡಿದ್ದಾರೆ.
ರಾಣಿಬೆನ್ನೂರು ಉಪ ಚುನಾವಣೆಯ ಪ್ರಚಾರಕ್ಕೆ ಹೊರಡುವ ಮುನ್ನ ಜಿಎಂಐಟಿ ಗೆಸ್ಟ್ ಹೌಸ್‍ನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಉಪಚುನಾವಣೆಯಲ್ಲಿ ಹಣದ ಹೊಳೆಯನ್ನು ಹರಿಸುತ್ತಾರೆ ಎಂದು ವಿರೋಧ ಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಎರಡು ಪಕ್ಷಗಳು ಈ ರೀತಿ ಮಾಡುವಂತಹ ಸಾಧ್ಯತೆ ಇರಬಹುದು ಎಂದು ನನಗೆ ಅನಿಸುತ್ತೆ, ಆದ್ದರಿಂದ ಅವರು ಈ ರೀತಿ ಹೇಳುತ್ತಿದ್ದಾರೆ. ಕಾನೂನಿನ ಪ್ರಕಾರ ಚುನಾವಣೆ ನಡೆಯಬೇಕು ಹಾಗೂ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದು ತಿರುಗೇಟು ಕೊಟ್ಟರು.
ವಿರೋಧ ಪಕ್ಷಗಳಿಗೆ ಗೊತ್ತಾಗಿದೆ 15 ಕ್ಕೆ 15 ಕ್ಷೇತ್ರಗಳಲ್ಲಿ ಸೋಲು ಖಚಿತ ಎಂದು. ಅದಕ್ಕೆ ನಾವು ಹೊಸ ಸರ್ಕಾರ ಮಾಡುತ್ತೇವೆ ಎಂದು ಹೊಸ ರಾಗ ಪ್ರಾರಂಭಿಸಿದ್ದಾರೆ. ಒಂದು ವಾರದಿಂದ ಸರ್ಕಾರ ಮಾಡಲ್ಲ ಎಂದವರು ಈಗ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ. ಸೋಲುವ ಭೀತಿಯಿಂದ ನಮ್ಮ ಮತದಾರರಾದರೂ ನಮ್ಮ ಪಕ್ಷಕ್ಕೆ ಮತಹಾಕಲಿ ಎಂದು ಈ ರೀತಿ ಮಾತನಾಡುತ್ತಿದ್ದಾರೆ. ಇದಕ್ಕಾಗಿ ಸಂಬಂಧ ಇದ್ದವರು, ಇಲ್ಲದವರು ದಿನಕ್ಕೆ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಇಷ್ಟೇ ಅಲ್ಲದೆ ಕಾಂಗ್ರೆಸ್ಸಿನ ಹರಿಪ್ರಸಾದ್ ಹಾಗೂ ಮೊಯ್ಲಿ ಅವರ ಇತ್ತೀಚಿನ ಮಾತುಗಳನ್ನು ಕೇಳಿದರೆ ಸೋಲುತ್ತೇವೆ ಎನ್ನುವುದು ಅವರಿಗೆ ಗೊತ್ತಾಗಿದೆ ಅನಿಸುತ್ತೆ. ಕಾಂಗ್ರೆಸ್ಸಿನಲ್ಲಿ ಅಂತರಿಕ ಹೊಂದಾಣಿಕೆ ಇಲ್ಲ ಎನ್ನುವುದು ಈಗ ಹೊರ ಬಿದ್ದಿದೆ. ಸಿದ್ದರಾಮಯ್ಯ ಎಲ್ಲಾ ಕಡೆ ಒಬ್ಬರೇ ಓಡಾಡುತ್ತಿದ್ದಾರೆ. ಉಳಿದವರು ಪತ್ರಿಕಾಗೋಷ್ಠಿಗಷ್ಟೇ ಸೀಮಿತರಾಗಿದ್ದಾರೆ. ಇದು ಕಾಂಗ್ರೆಸ್ಸಿನವರಿಗೆ ಸೋಲಿನ ಬಗ್ಗೆ ಸ್ಪಷ್ಟವಾಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಸಚಿವರು ಟಾಂಗ್ ಕೊಟ್ಟರು.
ಕಾಂಗ್ರೆಸ್ ಶಾಸಕರು ಅಸಮಧಾನಗೊಂಡಿದ್ದು, ಅವರಲ್ಲಿ ನಂಬಿಕೆ ಮೂಡಿಸಲು ಅವರ ನಾಯಕರು ಸರ್ಕಾರ ರಚನೆ ಮಾಡುತ್ತೇವೆ ಎನ್ನುತ್ತಾರೆ. ಈ ಮಧ್ಯೆ ಖರ್ಗೆಯವರ ದಿಢೀರ್ ಪ್ರವೇಶ ಸರ್ಕಾರ ರಚನೆಗಾಗಿ ಅಲ್ಲ ಎನ್ನುವುದು ಗೊತ್ತಿದೆ. ಖರ್ಗೆಯವರು ಒಳ್ಳೆ ಸುದ್ದಿ ನೀಡುತ್ತೇವೆ ಎನ್ನುತ್ತಾರೆ. ಯಾರಿಗೆ ಒಳ್ಳೆ ಸುದ್ದಿ? ರಾಜ್ಯದ ಜನತೆಗಿರಬೇಕು ಅಷ್ಟೇ ಎಂದರು. ಹಾಗೆಯೇ ಇದೇ ಸಂದರ್ಭದಲ್ಲಿ ಜೆಡಿಎಸ್ ನ ಶಾಸಕರು ಬಿಜೆಪಿ ಸೇರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಗೃಹ ಸಚಿವರು ಹಿಂದೇಟು ಹಾಕಿದರು.