ಬೆಂಗಳೂರು: ಆರ್ಥಿಕವಾಗಿ, ಆಡಳಿತದ ದೃಷ್ಟಿಯಿಂದ 2022 ಸವಾಲಿನ ವರ್ಷವಾಗಿದ್ದು, ಇದನ್ನು ಎಲ್ಲರೂ ಒಗ್ಗೂಡಿ ಸಮರ್ಥವಾಗಿ ಎದುರಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಹೊಸವರ್ಷದ ಶುಭಾಶಯ ಕೋರಿ ಮಾತನಾಡಿದ ಅವರು, ಕೋವಿಡ್ ಸಂಭಾವ್ಯ ಮೂರನೇ ಅಲೆಗೆ ನಾವು ಸಿದ್ಧರಾಗಬೇಕಾಗಿದೆ. ಜೊತೆಗೆ ಆರ್ಥಿಕತೆಯೂ ಮುನ್ನಡೆಯಬೇಕಾಗಿದೆ. ಕೇವಲ ನಿರ್ಬಂಧಗಳನ್ನು ಜಾರಿಗೊಳಿಸಿ ಸುಮ್ಮನಿರಲಾಗದು. ನಾವು ಈ ಸವಾಲನ್ನು ವಿಭಿನ್ನ ಕಾರ್ಯತಂತ್ರದಿಂದ ಎದುರಿಸಬೇಕು. ಇದಕ್ಕಾಗಿ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಚಿವರಲ್ಲಿ ಯಾರು ಪಾಸ್? ಫೇಲ್?: ಎಕ್ಸಾಂ ನಡೆಸಲು ಬರ್ತಾರಂತೆ ಅಮಿತ್ ಶಾ
ನಿಮ್ಮ ಇಲಾಖೆಯಲ್ಲಿ ಅನವಶ್ಯಕ ವೆಚ್ಚ ಕಡಿತಗೊಳಿಸಿ. ತೆರಿಗೆ ಸಂಗ್ರಹ ಇಲಾಖೆಗಳು ಇನ್ನಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸಿ ರಾಜ್ಯದ ಆರ್ಥಿಕತೆಯನ್ನು ಉತ್ತಮ ಪಡಿಸಬೇಕು. ಸಕಾರಾತ್ಮಕ ಭಾವನೆಯಿಂದ ಈ ಸವಾಲು ಎದುರಿಸಬೇಕು. ಉತ್ತಮ ಚಿಂತನೆ ಉತ್ತಮ ಕೆಲಸಗಳಿಗೆ ಎಡೆ ಮಾಡುತ್ತವೆ. ಉತ್ತಮ ಕೆಲಸಗಳು ಉತ್ತಮ ಜೀವನಕ್ಕೆ ದಾರಿ. ಆದ್ದರಿಂದ ಸಕಾರಾತ್ಮಕವಾಗಿ ಯೋಚಿಸಿ, ನಿಮ್ಮ ಕೆಲಸವನ್ನು ಪ್ರೀತಿಸಿ. ಆಗ ಫಲಿತಾಂಶ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು
ಕಳೆದ 5 ತಿಂಗಳಲ್ಲಿ ಆಡಳಿತದಲ್ಲಿ ಅತಿ ಕಡಿಮೆ ಹಸ್ತಕ್ಷೇಪ ಮಾಡಿದ ಸರ್ಕಾರ ನಮ್ಮದು. ನೀವು ಸ್ವತಃ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ನಿಮ್ಮ ಅನುಭವದ ಫಲ ರಾಜ್ಯದ ಬಡ ಜನತೆಗೆ ಅನುಕೂಲ ಮಾಡಿಕೊಡಲಿ ಎಂದು ಹಾರೈಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ ಪ್ರವೀಣ್ ಸೂದ್ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.