ಬೆಂಗಳೂರು: ಬಿಡಿಎ ಮಂಜೂರು ಮಾಡಿರುವ ನಿವೇಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಹಸ್ತಾಂತರಿಸಿದರು.
ಕೆಲ ದಿನಗಳ ಹಿಂದಷ್ಟೇ ತಿಮ್ಮಕ್ಕ ಸಿಎಂ ಅವರನ್ನು ಭೇಟಿ ಮಾಡಿದ್ದರು. ಸಿಎಂ ಸೂಚನೆ ಮೇರೆಗೆ ನಿವೇಶನ ಹಂಚಿಕೆ ಪತ್ರವನ್ನು ಬಿಡಿಎ ತಿಮ್ಮಕ್ಕನಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಲುಮರದ ತಿಮ್ಮಕ್ಕನಿಗೆ ನಿವೇಶನ ಕ್ರಯ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಇಂದು ಮುಂಜಾನೆ ರೇಸ್ ಕೋರ್ಸ್ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ ಸಾಕು ಪುತ್ರನಿಗೆ ಸಿಎಂ ಕರಾರು ಪತ್ರ ನೀಡಿದರು. ನಾಡಪ್ರಭು ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್ ಜೆ ಸೆಕ್ಟರ್‌ನಲ್ಲಿ ನಿವೇಶನ ಹಂಚಿಕೆ ಆಗಿದ್ದು, ಒಟ್ಟು 50*80 ಚದರ ಅಡಿಯ ನಿವೇಶನ ನೀಡಿದೆ. ಇದನ್ನೂ ಓದಿ: ಅಸ್ಸಾಂ ಪ್ರವಾಹ- 10 ಮಂದಿ ಬಲಿ, ಸಾವಿನ ಸಂಖ್ಯೆ 118ಕ್ಕೆ ಏರಿಕೆ
ಎರಡು ಬಾರಿ ಬಿಡಿಎ ನಿವೇಶನವನ್ನು ಹಸ್ತಾಂತರಿಸಿದ್ದು ಯಾಕೆ: ವೃಕ್ಷಮಾತೆ ಸಾಲುಮರದ ತಿಮ್ಮಕ್ಕಗೆ ಸರ್ಕಾರದಿಂದ ಮಂಜೂರಾದ ಬಿಡಿಎ ನಿವೇಶನದ ಕ್ರಯಪತ್ರವನ್ನು ಎರಡೆರಡು ಸಲ ಹಸ್ತಾಂತರ ಮಾಡಿದ ಪ್ರಸಂಗ ನಡೆದಿದೆ. ನಿವೇಶನದ ಅದೇ ಕ್ರಯಪತ್ರವನ್ನು ಒಮ್ಮೆ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥರಿಂದಲೂ, ಮತ್ತೊಮ್ಮೆ ಸಿಎಂ ಬೊಮ್ಮಾಯಿ ಅವರಿಂದಲೂ ಹಸ್ತಾಂತರ ಮಾಡಲಾಗಿದೆ. ರೇಸ್ ಕೋರ್ಸ್ ನಿವಾಸದಲ್ಲಿಂದು ಸಿಎಂ ಬೊಮ್ಮಾಯಿ, ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನದ ಕ್ರಯ ಪತ್ರವನ್ನು ಹಸ್ತಾಂತರಿಸಿದರು. ಆದರೆ ಮೊನ್ನೆ 22ರಂದೇ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಸಿಎಂ ಸೂಚನೆ ಮೇರೆಗೆ ತಿಮ್ಮಕ್ಕಗೆ ಬಿಡಿಎ ಕಚೇರಿಯಲ್ಲಿ ನಿವೇಶನದ ಕ್ರಯಪತ್ರ ಹಸ್ತಾಂತರಿಸಿದ್ದರು.
ಆದರೆ ನಿವೇಶನದ ಕ್ರಯಪತ್ರವನ್ನು ಸಿಎಂ ಅವರ ಕೈಯಿಂದಲೇ ಪಡೆಯಬೇಕೆಂಬ ಆಸೆ ಇಟ್ಕೊಂಡಿದ್ರು ತಿಮ್ಮಕ್ಕ. ಹೀಗಾಗಿ ಇಂದು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಅವರಿಂದ ಕ್ರಯಪತ್ರ ಪಡೆದುಕೊಂಡಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ಜೆ ಸೆಕ್ಟರ್‌ನಲ್ಲಿ 50*80 ಚದರ ಅಡಿಯ ನಿವೇಶನವನ್ನು ತಿಮ್ಮಕ್ಕ ಅವರಿಗೆ ಹಂಚಿಕೆ ಮಾಡಲಾಗಿದೆ.