ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸುರಿದ ರಣ ಮಳೆಯಿಂದ ಮೃತರಾಗಿದ್ದ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸುರಿದ ಮಳೆಯಿಂದ ಭಾರೀ ಹಾನಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಹಾನಿ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮನೆಗೆ ನೀರು ನುಗ್ಗಿದರೆ 25 ಸಾವಿರ ಹಾಗೂ ಮೃತಪಟ್ಟವರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಈ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಳೆ ಜಾಸ್ತಿಯಾದಾಗ ತಗ್ಗು ಪ್ರದೇಶಗಳಿಗೆ ನೀರು ಬರುತ್ತದೆ. ಇಲ್ಲಿನ ಭೌಗೋಳಿಕವಾಗಿ ಜಾಗವು ಹಾಗೆಯೇ ಇದೆ. ಒಟ್ಟಾರೆಯಾಗಿ 10ರಿಂದ 15 ಮನೆಗಳಿಗೆ ನೀರು ನುಗ್ಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಕೆಲವೊಂದು ಕಡೆ ರಾಜಕಾಲುವೆ ನೀರು ಒಂದೇ ಕಡೆ ನಿಲ್ಲುತ್ತದೆ. ಇದಕ್ಕೆ ಪರಿಹಾರವೆಂದರೆ ರಾಜಕಾಲುವೆ ನೀರನ್ನು ಹೊರಗಡೆಗೆ ತಿರುಗಿಸಬೇಕು ಎಂದರು.
ಬೆಂಗಳೂರಿನ ಉಲ್ಲಾಳ ಉಪನಗರದ ಬಳಿಯಲ್ಲಿ ಮಳೆಯಿಂದಾಗಿ ಕಾವೇರಿ 5ನೇ ಹಂತದ ಕಾಮಗಾರಿಗೆ ಪೈಪ್‍ಲೈನ್ ಅಳವಡಿಸುವ ಕೆಲಸ ಮಾಡುತ್ತಿದ್ದ ಮೂವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತದೇಹಗಳು ಪತ್ತೆಯಾಗಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣಮಳೆಗೆ ಇಬ್ಬರು ಕಾರ್ಮಿಕರು ಬಲಿ
ಭಾರೀ ಮಳೆಗೆ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜನ ಹರಸಾಹಸ ಪಡುತ್ತಿದ್ದಾರೆ. ಮುಳುಗಿದ ರಸ್ತೆಯಿಂದಾಗಿ ವಾಹನಗಳಲ್ಲಿ ನೀರು ತುಂಬಿಕೊಂಡಿದೆ. ಬೆಳಗ್ಗೆ ಮಳೆ ಕೊಂಚ ಬಿಡುವು ನೀಡಿದ್ದು, ಮನೆಯ ಆವರಣ, ವಾಹನಗಳನ್ನು ಶುಚಿಗೊಳಿಸುವ ಕಾರ್ಯದಲ್ಲಿ ಜನ ನಿರತರಾಗಿದ್ದಾರೆ. ಸಾರ್ವಜನಿಕರು ಬಿಬಿಎಂಪಿಯ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಇಂದು 1 ರಿಂದ 10ನೇ ತರಗತಿವರೆಗೆ ರಜೆ ಘೋಷಣೆ