DistrictsHaveriKarnatakaLatestMain Post

2ಎ ಮೀಸಲಾತಿ ನೀಡಿ, ಕೊಟ್ಟಮಾತು ಉಳಿಸಿಕೊಳ್ಳಿ ಸಿಎಂ ಬೊಮ್ಮಾಯಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಹಾವೇರಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಈ ಹಿಂದೆ 712 ಕಿ.ಮೀ ಬಾಗಲಕೋಟೆಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದ್ದೇವೆ. ನಮ್ಮ ಸಮಾಜಕ್ಕೆ ಮೀಸಲಾತಿ ಅನಿರ್ವಾತೆ ಇದೆ. ಹಿಂದಿನ ಸಿಎಂ ಯಡಿಯೂರಪ್ಪ ಅಧಿವೇಶನದಲ್ಲಿ ಮಾತು ಕೊಟ್ಟಿದ್ದರು. ಈಗ ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬಸವರಾಜ ಬೊಮ್ಮಾಯಿ ಕೊಟ್ಟಮಾತು ಉಳಿಸಿಕೊಳ್ಳಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಬೆಳೆಗಾವಿ ಅಧಿವೇಶನದ ಅವಧಿಯಲ್ಲಿ ಬೊಮ್ಮಾಯಿ ಮೂರು ತಿಂಗಳ ಅವಕಾಶ ಕೇಳಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ನಮ್ಮ ಸಮುದಾಯದ ನಾಯಕರಿಗೆ ಮೀಸಲಾತಿ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಏಪ್ರಿಲ್ 24 ಅಂತಿಮ ಗಡುವು ನೀಡಿದ್ದೇವು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಮೇ 23 ರಂದು ರಾಜ್ಯದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹಾಗೂ ಬಸವರಾಜ ಬೊಮ್ಮಾಯಿ ನಿವಾಸದ ಮುಂದೆ ಸತ್ಯಾಗ್ರಹ ಮಾಡಲು ನಿರ್ಧಾರ ಮಾಡಲಾಗಿತ್ತು. ರಾಜ್ಯದಲ್ಲಿ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ 23ರಂದು ನಡೆಯುವ ಸತ್ಯಾಗ್ರಹ ಮುಂದೂಡಲಾಗಿದೆ. ಬರುವ ಜೂನ್‍ನಲ್ಲಿ ಇನ್ನೊಂದು ಸಭೆ ನಡೆಸಿ ಸತ್ಯಾಗ್ರಹವನ್ನು ಪ್ರಾರಂಭ ಮಾಡುವ ಕುರಿತಂತೆ ದಿನಾಂಕ ನಿಗದಿ ಮಾಡುತ್ತೇವೆ. ಬೊಮ್ಮಾಯಿ ಪಂಚಮಸಾಲಿ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದರು.

ಶಿಗ್ಗಾಂವಿಯಲ್ಲಿ ನಡೆದ ಪಂಚಮಸಾಲಿ ಸಮುದಾಯದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಕಣ್ಣೀರು ಹಾಕಿದ್ದೀರಿ. ಬಿಸಿರೊಟ್ಟಿ, ನವಣಕ್ಕಿ ಅನ್ನ ಕೊಟ್ಟಿದ್ದೀರಿ ಅಂತಾ ಹೇಳಿದ್ದೀರಿ. ಅದರ ಋಣ ತೀರಿಸಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಕಳೆದ ಎರಡು ತಿಂಗಳಿನಿಂದ ಬಸವರಾಜ ಬೊಮ್ಮಾಯಿ ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಪರೋಕ್ಷವಾಗಿ ಹರಿಹರದ ಪಂಚಮಸಾಲಿ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸುಖದ ಸುಪ್ಪತ್ತಿಗೆಯಲ್ಲಿ ಇದ್ದಾರೆ. ಮೀಸಲಾತಿ ಸಮಾಜಕ್ಕೆ ಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿ ಮಾತು ಕೇಳಬೇಕು. ಮಗುವಿಗೆ ಹಸಿವಾದಾಗ ಹಾಲು ಕುಡಿಸಬೇಕು. ಆಗ ಕುಡಿಸದಿದ್ದರೆ ಮಗು ಸಾಯುತ್ತದೆ. ಸಮಾಜ ಈಗ ಮಗುವಿನಂತೆ ಮೀಸಲಾತಿ ಕೇಳುತ್ತಿದೆ. ಸರ್ಕಾರ ತಾಯಿಯಂತೆ ಮೀಸಲಾತಿ ನೀಡಬೇಕು ಇಲ್ಲದಿದ್ದರೆ ಸಮಾಜ ಸಾಯುತ್ತದೆ. ಮೀಸಲಾತಿ ನೀಡುವ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಪ್ರಾರಂಭ ಆಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.

Back to top button