– ಕೊನೆಗೆ ಕಾಲು ಹಿಡಿದು ಕ್ಷಮೆ ಕೇಳಿದ್ರು
ಮಂಡ್ಯ: ಇತ್ತೀಚೆಗೆ ಸಕ್ಕರೆನಾಡು ಮಂಡ್ಯದಲ್ಲಿ ದೇವರ ಬಸಪ್ಪಗಳು ಒಂದಲ್ಲ ಒಂದು ಪವಾಡದ ಮೂಲಕ ಜಿಲ್ಲೆಯಲ್ಲಿ ಪವಾಡ ಮೆರೆಯುತ್ತಿದೆ. ಹೀಗಿರುವಾಗ ಬಸಪ್ಪವೊಂದರ ಪವಾಡವನ್ನೆ ಪರೀಕ್ಷಿಸಲು ಹೋಗಿ ಇಬ್ಬರು ಭಕ್ತರು ಅದರ ಕೋಪಕ್ಕೆ ಗುರಿಯಾಗಿ ಕೊನೆಗೆ ಕಾಲು ಹಿಡಿದು ಕ್ಷಮೆ ಕೋರಿದ ಘಟನೆ ನಡೆದಿದೆ.
ನಾಗಮಂಗಲ ತಾಲೂಕಿನ ಜುಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಭಕ್ತರು ಊರಿಗೆ ಪಾದಪೂಜೆಗೆಂದು ಬಂದಿದ್ದ ಬಸಪ್ಪನನ್ನು ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಓರ್ವ ಬೆಂಗಳೂರಿನ ಪೊಲೀಸ್ ನೌಕರಿಯಲ್ಲಿದ್ದು, ಏನು ಸಮಸ್ಯೆ ಇಲ್ಲದಿದ್ರು ತನಗೆ ಸಮಸ್ಯೆ ಇದೆ ಎಂದು ಹೇಳಿಕೊಂಡು ಬಸಪ್ಪನ ಬಳಿ ಬಂದು ಪಾದ ಕೇಳಿದ್ದಾನೆ. ಇದರಿಂದ ಕೋಪಗೊಂಡ ಬಸಪ್ಪ ಪಾದಪೂಜೆಗೆಂದು ಬಂದಿದ್ದ ರಾಮನಗರದ ಜಯಪುರದ ಆ ವ್ಯಕ್ತಿಯನ್ನು ಕೊಂಬಿನಲ್ಲಿ ತಿವಿಯುತ್ತಾ ಅಟ್ಟಾಡಿಸಿದೆ.
ಕೊನೆಗೆ ಆ ವ್ಯಕ್ತಿ ತನ್ನ ತಪ್ಪನ್ನು ಮನ್ನಿಸುವಂತೆ ಬಸಪ್ಪನ ಕಾಲು ಹಿಡಿದು ಕ್ಷಮೆ ಕೋರಿದ ಬಳಿಕ ಅದು ಶಾಂತವಾಗಿದೆ. ಇನ್ನು ಪಾದಪೂಜೆ ಬಳಿಕ ಕುಡುಕ ವ್ಯಕ್ತಿಯೊಬ್ಬ ಬಸಪ್ಪನನ್ನು ಛೇಡಿಸಲು ಮುಂದಾಗಿ ಬಸಪ್ಪನ ಪಾದ ಕೇಳಲು ಮುಂದಾಗಿದ್ದಾನೆ. ಇದರಿಂದ ಕೆರಳಿದ ಬಸಪ್ಪ ಆತನ ಎರಡು ಹಸ್ತದ ಮೇಲೆ ಗಂಟೆಗಟ್ಟಲೇ ತನ್ನ ಬಲಕಾಲು ಇಟ್ಟಿದೆ. ಬಸಪ್ಪನ ಈ ಕಾರ್ಯದಿಂದ ಕುಡಿದ ಆ ವ್ಯಕ್ತಿ ಕೊನೆಗೆ ಕಣ್ಣೀರು ಹಾಕಿ ತನ್ನನ್ನು ಕ್ಷಮಿಸಿವಂತೆ ಕೇಳಿಕೊಂಡಿದ್ದಾನೆ.
ಬಳಿಕ ಆತ ಕುಡಿತದ ದಾಸನಾಗಿರುವ ಬಗ್ಗೆ ಆತನ ಪತ್ನಿ ಬಸಪ್ಪನ ಮುಂದೆ ಹೇಳಿದ್ದಾರೆ. ಮಹಿಳೆ ಹೇಳುತ್ತಿದ್ದಂತೆ ಬಸಪ್ಪ ಆತನನ್ನು ಮನೆಯೊಳಗಡೆ ಅಟ್ಟಾಡಿಸಿಕೊಂಡು ಕೊಂಬಿನಿಂದ ಹೊಡೆದು ತಿವಿದು, ಕೈ ಮೇಲೆ ತನ್ನ ಪಾದವಿಟ್ಟಿದೆ. ಕೊನೆಗೆ ಆತ ಬಸಪ್ಪನ ಬಳಿ ಕ್ಷಮೆ ಕೇಳಿ ಇನ್ಮುಂದೆ ಕುಡಿಯುವುದಿಲ್ಲ ಎಂದು ಪ್ರಮಾಣ ಮಾಡಿದ್ದಾನೆ. ಕ್ಷಮೆ ಕೇಳುತ್ತಿದ್ದಂತೆ ಬಸಪ್ಪ ಶಾಂತಗೊಂಡು ಹಸ್ತದ ಮೇಲಿಟ್ಟ ಪಾದ ತೆಗೆದಿದೆ. ಮದ್ಯದ ನಶೆಯಲ್ಲಿದ್ದ ಆ ವ್ಯಕ್ತಿ ಕೊನೆಗೆ ಆ ಬಸಪ್ಪನಿಗೆ ಪೂಜೆ ಸಲ್ಲಿಸಿ ಇನ್ಮುಂದೆ ಕುಡಿಯುವುದಿಲ್ಲ ಎಂದು ಪ್ರಮಾಣ ಮಾಡಿದ್ದಾನೆ. ಊರಿಗೆ ಬಂದ ಜಯಪುರದ ಬಸಪ್ಪ ಮಾಡಿದ ಈ ಎರಡು ಕೆಲಸಗಳನ್ನು ಆ ಊರಿನ ಜನರು ಹೊಗಳುತ್ತಾ ಬಸಪ್ಪನ ಪವಾಡವನ್ನು ಕೊಂಡಾಡಿದ್ದಾರೆ.