ಬಿಜೆಪಿಯಲ್ಲಿ ಸಿಎಂ ಸ್ಥಾನ ಲಾಬಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಾಚಾರ್ಯ

ದಾವಣಗೆರೆ: ಬಿಜೆಪಿಯಲ್ಲಿ ಸಿಎಂ, ಸಚಿವ ಸ್ಥಾನ ಲಾಬಿಗೆ ಅವಕಾಶವಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಯನ್ನು ವಿರೋಧಿಸಿದರು.
ದೆಹಲಿಯಿಂದ ಬಂದವರು ನಿಮಗೆ ಸಿಎಂ ಮಾಡ್ತೀವಿ 2,500 ಕೋಟಿ ರೆಡಿ ಮಾಡ್ರೀ ಎಂದಿದ್ರು ಎಂದು ಶಾಸಕ ಯತ್ನಾಳ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರೋಧಿಸಿ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹೇಳಿಕೆ ತಪ್ಪು. ಬಹಿರಂಗ ಸಭೆಯಲ್ಲಿ ಹೇಳುವ ಅವಶ್ಯಕತೆ ಇರಲಿಲ್ಲ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ
ಬಿಜೆಪಿಯಲ್ಲಿ ಸಿಎಂ ಸಚಿವ ಸ್ಥಾನಕ್ಕೆ ಲಾಬಿಗೆ ಅವಕಾಶವಿಲ್ಲ. ಯತ್ನಾಳ್ ನನಗಿಂತ ಹಿರಿಯರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಬಿಜೆಪಿ ಮುಖಂಡರು ಅಂತ ಹೇಳಿಲ್ಲ, ಯಾರೋ ಮಧ್ಯವರ್ತಿಗಳು ಎಂದು ಹೇಳಿದ್ದಾರೆ. ಆದರೆ ಈ ವಿಷಯಗಳ ಬಗ್ಗೆ ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡಬಾರದು ಎಂದು ಮನವಿ ಮಾಡುತ್ತೇವೆ ಎಂದರು.
ಶಾಸಕಾಂಗ ಸಭೆಯಲ್ಲಿ ನಿರ್ಣಯವಾದ ನಂತರ ಬೊಮ್ಮಾಯಿ ಸಿಎಂ ಆಗಿದ್ದಾರೆ. ನಮ್ಮಲ್ಲಿ ಹಣ ಕೇಳುವ ಸಂಸ್ಕೃತಿ ಇಲ್ಲ. ಅದು ಕಾಂಗ್ರೆಸ್ ಸಂಸ್ಕೃತಿ, ಲಕೋಟೆ ಸಂಸ್ಕೃತಿ ನಮ್ಮಲ್ಲಿ ಎಂದಿಗೂ ಇಲ್ಲ. ಯಾರನ್ನು ಸಚಿವರನ್ನಾಗಿ ಮಾಡಬೇಕು, ಯಾರನ್ನು ಬಿಡಬೇಕು ಅದು ಸಿಎಂ ಹಾಗೂ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಬಿಜೆಪಿ ಪ್ರಭಾವಿಗಳಿದ್ದಾರೆಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡ್ತಿರುವುದು ಗಾಳಿಯಲ್ಲಿ ಗುಂಡು ಹೊಡೆಯುವ ಸಂಸ್ಕೃತಿ. ಸರ್ಕಾರ ಪಥನವಾಗುತ್ತದೇ ಎಂದು ಹೇಳುವುದಲ್ಲಾ ಅದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮಠದ ಶ್ರೀಗಳಂತೆ ಮಾತನಾಡಿದ್ರು: ಸಿದ್ದು ಹೊಗಳಿದ ಡಿಕೆಶಿ
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ದಿನ ಬೆಳಗ್ಗೆಯಾದರೆ ರಾಜೀನಾಮೆ ಎಂದು ಹೇಳುತ್ತಾರೆ. ಅವರ ಅವಧಿಯಲ್ಲಿ ಎಷ್ಟು ಜನ ಸಚಿವರ ರಾಜೀನಾಮೆ ಪಡೆದಿದ್ದಾರೆ. ರಾಜೀನಾಮೆ ಕೇಳುವ ನೈತಿಕತೆ ಅವರಿಗಿಲ್ಲ ಎಂದು ಟಾಂಗ್ ಕೊಟ್ಟರು.