ವಿಜಯಪುರ: ಲೋಕಸಭಾ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರ ಬಳಿ ಪಾಸ್ ಕೊಡಿ ಎಂದು ಜನ ಬರುತ್ತಾರೆ. ಪಾಸ್ ಪಡೆದು ಹೋದವರನ್ನು, ನಾವೇ ಬಾಂಬ್ ಇಟ್ಟುಕೊಂಡಿದ್ದಾರಾ? ಭಯೋತ್ಪಾದಕರಾ? ಎಂದು ಸ್ಕ್ರೀನಿಂಗ್ ಮಾಡಲು ಆಗುತ್ತದೆಯೇ? ಈ ಪ್ರಕರಣದ ತನಿಖೆಯಾದರೆ ಯಾರು ಈಗ ಟೀಕೆ ಮಾಡುತ್ತಿದ್ದಾರೋ ಅವರೇ ಸಿಕ್ಕಿಬೀಳುತ್ತಾರೆ ಎಂದು ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಹಲವರು ಪಾಸ್‍ಗಾಗಿ ಬರುತ್ತಾರೆ. ಕಾಂಗ್ರೆಸ್‍ನವರು ಬಂದ್ರೂ ನಾವು ಪಾಸ್ ಕೊಡುತ್ತೇವೆ. ನನ್ನ ಬಳಿ ಕಾಂಗ್ರೆಸ್‍ನವರು ಬಂದು ಪಾಸ್ ಒಯ್ಯುತ್ತಾರೆ. ಅವರನ್ನೆಲ್ಲ ನಾವು ಸ್ಕ್ರೀನಿಂಗ್ ಮಾಡಲು ಆಗುವುದಿಲ್ಲ. ಅದು ಭದ್ರತಾ ಸಿಬ್ಬಂದಿಯ ಕೆಲಸ ಎಂದು ಸಂಸದ ಪ್ರತಾಪ್ ಸಿಂಹ ಪರ ಅವರು ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ವಾರಣಾಸಿ ರೋಡ್ ಶೋ ವೇಳೆ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ!
Advertisement
ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶ ಹಾಗೂ ಮಣಿಪುರ ಬೆತ್ತಲೆ ಪ್ರಕರಣದ ವಿಚಾರಕ್ಕೆ ಕಾಂಗ್ರೆಸ್‍ನ (Congress) ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮೊಸಳೆ ಕಣ್ಣೀರು ಹಾಕಿದ್ದರು. ಅದನ್ನೇನು ಬಿಜೆಪಿಯವರು ಮಾಡಿದ್ರಾ? ಯಾವುದೇ ರಾಜ್ಯದಲ್ಲಿಯಾಗಲಿ, ಯಾವುದೇ ಜಾತಿಯವರು ಇರಲಿ, ಯಾವ ಸರ್ಕಾರವಿದ್ದರೂ ಮಹಿಳೆಯರ ಮೇಲೆ ಇಂತಹ ದೌರ್ಜನ್ಯ ನಡೆಯಬಾರದು. ಈಗ ರಾಜ್ಯದಲ್ಲಿ ಇಂತಹ ಪ್ರಕರಣ ನಡೆದು ಬಿಟ್ಟಿದೆ. ಈಗೇಕೆ ರಾಹುಲ್ ಹಾಗೂ ಪ್ರಿಯಾಂಕಾ ಇಬ್ಬರೂ ಖಂಡಿಸಿಲ್ಲ ಅಲ್ಲದೇ ಅವರು ಈಗ ಇಲ್ಲಿಗೆ ಬರಲಿಲ್ಲ. ರಾಜಸ್ಥಾನದಲ್ಲಿ ದಲಿತ ಮಹಿಳೆ ದೌರ್ಜನ್ಯ ಆದರೂ ಬರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಎಲ್ಲಿ ಬಿಜೆಪಿ ಸರ್ಕಾರ ಇದೆ ಅಲ್ಲಿಗೆ ಹೋಗಿ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ನಾಟಕ ಮಾಡುತ್ತಾರೆ. ಬೆಳಗಾವಿಗೆ ಅವರು ಬರಬೇಕಾಗಿತ್ತು. ಅದನ್ನು ಬಿಟ್ಟು ಕೇವಲ ರಾಜಕೀಯ ಮಾಡುವುದು ಬೇಡ. ಯಾವುದೇ ರಾಜಕೀಯ ಪಕ್ಷವಿರಲಿ ಇತಂಹ ಘಟನೆಗಳು ನಡೆದಾಗ ಅದನ್ನು ಖಂಡಿಸಬೇಕು. ಗೃಹಸಚಿವರು ಹೋಗಿ ಭೇಟಿ ಆಗಿ ಏನು ಮಾಡಿದ್ದಾರೆ? ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ಹೋದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಯ್ಯುವುದು ಹಾಗೂ ಭಾಷಣ ಮಾಡುವುದು ಇದಕ್ಕೆ ಪರಿಹಾರ ಅಲ್ಲ ಎಂದು ಕಿಡಿಕಾರಿದ್ದಾರೆ.
Advertisement
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರವಾಗಿ, ಮೈಸೂರಲ್ಲಿ ಟಿಪ್ಪು ಸುಲ್ತಾನ್ ಏನು, ಒಡೆಯರು ಏನು ಎಂಬ ಇತಿಹಾಸ ಇದೆ. ಮೈಸೂರು ಭಾಗ ಅಭಿವೃದ್ಧಿ ಆಗಲು ಮಹರಾಜರು ಕಾರಣ. ಇನ್ನೂ ಈ ಭಾಗ ಏಕೆ ಅಭಿವೃದ್ಧಿ ಆಗಲಿಲ್ಲ, ಆದಿಲ್ ಶಾಹಿ, ಕುತುಬ್ ಶಾಹಿ, ಆ ಶಾಹಿ, ಈ ಶಾಹಿ ಇವರು ಕೇವಲ ತಮ್ಮ ಹೆಂಡಿರು, ಮಕ್ಕಳು, ಪ್ರಿಯತಮೆಯರ ಗೋರಿ ಮಾಡುವುದನ್ನ ಬಿಟ್ರೆ ಏನೂ ಮಾಡಲಿಲ್ಲ. ಗೋಲಗುಬಂಜ್‍ಗೆ ಹೋಗಿ ನೋಡಿ ಆದಿಲ್ ಶಾಹಿ ಆ ಕಡೆ ಈ ಕಡೆ ಬರೀ ಹೆಂಗಸರ ಗೋರಿಗಳಿವೆ. ಬೀದರ್‍ಗೆ ಹೋಗಿ ನೋಡಿ, ರಾಯಚೂರಗೆ ಹೋಗಿ ನೋಡಿ ಬರಿ ಗೋರಿಗಳೇ ಇದಾವೆ ಎಂದು ವ್ಯಂಗ್ಯವಾಡಿದ್ದಾರೆ.
ನೀರಾವರಿ ಮಾಡಲಿಲ್ಲ, ಮೈಸೂರು ಒಡೆಯರು ಬಂಗಾರ ಒತ್ತೆ ಇಟ್ಟು ಕನ್ನಂಬಾಡಿ ಕಟ್ಟಿದರು. ಅದಕ್ಕೆ ಅದು ಅಭಿವೃದ್ಧಿ ಆಯ್ತು, ಇದನ್ನ ಸಿಎಂ ಕೂಡ ಒಪ್ಪಿಕೊಂಡಿದ್ದಾರೆ. ಇದನ್ನ ನಾನು ಮಾತ್ರ ಹೇಳುತ್ತಿಲ್ಲ. ಟಿಪ್ಪು ಸುಲ್ತಾನ್ ಏನು ಮಾಡಿದ. ಮೂರುವರೆ, ನಾಲ್ಕು ಸಾವಿರ ಹಿಂದೂ ದೇವಸ್ಥಾನಗಳನ್ನು ನಾಶ ಮಾಡಿದ. ಮಂಡ್ಯದಲ್ಲಿ ಐಯ್ಯಂಗಾರ್ ಬ್ರಾಹ್ಮಣರು ಇದುವರೆಗೂ ದೀಪಾವಳಿ ಆಚರಣೆ ಮಾಡಲ್ಲ. ದೀಪಾವಳಿ ದಿನ ಸಾವಿರಾರು ಹಿಂದೂಗಳ ಕಗ್ಗೋಲೆ ಆಗಿತ್ತು. ಈ ರೀತಿ ಇತಿಹಾಸಕ್ಕೆ ಯಾರು ಅಪಚಾರ ಮಾಡಿದ್ದಾರೆ ಅವರ ಹೆಸರು ಇಡುವುದಲ್ಲ. ಸಮಾಜಕ್ಕೆ ಕೊಡುಗೆ ಕೊಟ್ಟವರ ಹೆಸರನ್ನು ಇಡಬೇಕು. ಟಿಪ್ಪು ಸುಲ್ತಾನ್ ಬೆನ್ನು ಹತ್ತಿದವರಿಗೆ ರಾಜಕೀಯ ಭವಿಷ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯತ್ನಾಳ್‍ನಂತಹ ಹುಚ್ಚ ಯಾರಿಲ್ಲ ಬಿಡಿ: ಹೆಚ್.ವಿಶ್ವನಾಥ್