ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಸ್ಪರ್ಧೆ ಇಲ್ಲ; ಹೈಕಮಾಂಡ್ ವಾರ್ನ್ ಬಳಿಕ ಭಿನ್ನರ ಶಸ್ತ್ರತ್ಯಾಗ – ಬಿವೈವಿ ಫುಲ್ ಆ್ಯಕ್ಟಿವ್

Public TV
2 Min Read
VIJAYENDRA YATNAL

ಬೆಂಗಳೂರು: ರಾಜ್ಯಾಧ್ಯಕ್ಷರ ಆಯ್ಕೆ ಹತ್ತಿರ ಬರುತ್ತಿದ್ದಂತೆ ಕೇಸರಿ ನಾಯಕರ ಮಧ್ಯೆ ಮೇಲಾಟ ತೀವ್ರಗೊಂಡಿದೆ. ಅಧ್ಯಕ್ಷರ ಆಯ್ಕೆ ರೇಸ್‌‌ನಿಂದ ಭಿನ್ನರ ಪಡೆ ಹಿಂದಕ್ಕೆ ಸರಿದಿದೆ. ಹೈಕಮಾಂಡ್‌ ಅಸಹಕಾರ, ತಟಸ್ಥರ ಹಿಂಜರಿಕೆಯಿಂದ ಸೂಕ್ತ ಬೆಂಬಲ ಸಿಗದೇ ರೆಬೆಲ್ಸ್‌ಗೆ ದಿಕ್ಕು ತೋಚುತ್ತಿಲ್ಲ. ಈ ಬೆನ್ನಲ್ಲೇ ವಿಜಯೇಂದ್ರ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಇತ್ತ ಹೈಕಮಾಂಡ್, ಅಧ್ಯಕ್ಷರ ಆಯ್ಕೆ ಮಾಡದೇ ವಿಳಂಬ ಮಾಡ್ತಿರೋದು ಗೊಂದಲ ಮೂಡಿಸಿದೆ.

ರಾಜ್ಯ ಬಿಜೆಪಿಯಲ್ಲಿ (BJP) ಒಟ್ಟೊಟ್ಟಿಗೆ ಬಿರುಸಿನ ಚಟುವಟಿಕೆಗಳೂ ನಡೀತಿವೆ, ಗೊಂದಲವೂ ಮುಂದುವರೆದಿದೆ. ರಾಜ್ಯಾಧ್ಯಕ್ಷ ಹುದ್ದೆ ಜಟಾಪಟಿಯಲ್ಲಿ ಬಿಜೆಪಿ ಭಿನ್ನರಿಗೆ ಭಾರೀ ಹಿನ್ನಡೆ ಆಗಿದೆ. ಬದಲಾದ ಸನ್ನಿವೇಶದಿಂದ ಭಿನ್ನರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಕೈಬಿಟ್ಟಿದ್ದಾರೆ. ಯತ್ನಾಳ್‌ರನ್ನು ವಿಜಯೇಂದ್ರ ವಿರುದ್ಧ ಸ್ಪರ್ಧೆ ಮಾಡಿಸುವ ನಿರ್ಧಾರದಿಂದ ರೆಬೆಲ್‌ಗಳು ಹಿಂದಕ್ಕೆ ಸರಿದಿದ್ದಾರೆ. ಚುನಾವಣೆಗೆ ಹೈಕಮಾಂಡ್‌ ಸ್ಪಂದಿಸ್ತಿಲ್ಲ. ಚುನಾವಣೆ ಬದಲು ಸಹಮತ ಆಯ್ಕೆಗೆ ವರಿಷ್ಠರು ಮುಂದಾಗಿದ್ದಾರೆ. ಇತ್ತ ತಟಸ್ಥರು ಭಿನ್ನರಿಗೆ ಸಹಕರಿಸದೇ ಹಿಂಜರಿದಿದ್ದಾರೆ.‌ ಇದರಿಂದ ಭಿನ್ನರು ಹೈಕಮಾಂಡ್‌ ಸೂಚನೆಯಂತೆ ಶಸ್ತ್ರತ್ಯಾಗಕ್ಕೆ ಮುಂದಾಗಿದೆ.

ಭಿನ್ನರ ಪಡೆಗೆ ಈಗ ದಿಕ್ಕು ತೋಚದೇ ವಿಜಯೇಂದ್ರ ವಿರುದ್ಧದ ತಮ್ಮ ಹೋರಾಟಕ್ಕೆ ಹಿನ್ನಡೆಯಾಗಿದ್ರೂ ಒಗ್ಗಟ್ಟು ಕಾಯ್ದುಕೊಳ್ಳಲು ತೀರ್ಮಾನಿಸಿದ್ದರೆ. ಈ ಬೆನ್ನಲ್ಲೇ ಈಗಾಗಲೇ ಹತಾಷೆಯಲ್ಲಿರೋ ಯತ್ನಾಳ್ (Basangouda Patil Yatnal) ಇಂದು ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಗೆ ಇದ್ದ ಅಡ್ಡಿ ಶಮನವಾದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ದಾಖಲೆಗಳನ್ನು ದೇವಿ ಮುಂದಿಟ್ಟು ಯತ್ನಾಳ್ ಅರ್ಚನೆ ಮಾಡಿಸಿದರು. ಈ ವೇಳೆ ಕೆಲವು ಭಕ್ತರು ಯತ್ನಾಳ್ ಕಂಡು ಜೈ ವಿಜಯೇಂದ್ರ, ಜೈ ಬಿಎಎಸ್‌ವೈ (B.S. Yediyurappa) ಘೋಷಣೆ ಕೂಗಿದ್ದಾರೆ. ಆಗ ಯತ್ನಾಳ್ ಕೊಂಚ ಕಿರಿಕಿರಿಗೊಂಡ್ರು. ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿ ತೆರಳಿದ್ರು.

ಭಿನ್ನರ ಪಾಳಯಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಫುಲ್ ಆ್ಯಕ್ಟಿವ್ ಆಗಿದ್ದಾರೆ. ತಟಸ್ಥರ ವಿಶ್ವಾಸ ಗಳಿಸುವ ಕಸರತ್ತಿಗೆ ವಿಜಯೇಂದ್ರ ಮುಂದಾಗಿದ್ದಾರೆ. ತಮ್ಮ ಮೇಲೆ‌ ಮುನಿಸಿಕೊಂಡ ಆರ್.ಅಶೋಕ್‌‌ಗೆ ವಿಜಯೇಂದ್ರ ಸ್ನೇಹದ ಹಸ್ತ ಚಾಚಿ ಓಲೈಸಿದ್ದಾರೆ. ಯಡಿಯೂರಪ್ಪ ಕೂಡಾ ಪುತ್ರನ ಪರ ನಿಲ್ಲುವಂತೆ ಮಾಜಿ ಸಿಎಂ ಬೊಮ್ಮಾಯಿ ಜೊತೆ ಮಾತಾಡಿದ್ದಾರೆ. ಒಂದು ಮಟ್ಟಿಗೆ ಪಕ್ಷದಲ್ಲಿ ವಿಜಯೇಂದ್ರ ಕೈ ಮೇಲಾಗಿದೆ.‌ ಇದೇ ಜೋಶ್‌ನಲ್ಲಿ ವಿಜಯೇಂದ್ರ ತಾವೇ ಮತ್ತೆ ಮುಂದುವರೆಯುವ ವಿಶ್ವಾಸದಲ್ಲಿದ್ದಾರೆ.

ಇಷ್ಟೆಲ್ಲದರ ಮಧ್ಯೆ ಬಿಜೆಪಿ‌ ಅಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಮುಂದುವರೆದಿದೆ. ಈಗಾಗಲೇ ಮೂರ್ನಾಲ್ಕು ಮುಹೂರ್ತಗಳು ಕಳೆದು ಹೋಗಿದ್ರೂ ಹೈಕಮಾಂಡ್ ಹೊಸ ಅಧ್ಯಕ್ಷರ ಆಯ್ಕೆಗೆ ಇನ್ನೂ ಮನಸ್ಸು ಮಾಡಿದಂಗಿಲ್ಲ. ಸದ್ಯ ಅಧ್ಯಕ್ಷರ ಆಯ್ಕೆ ಸಹಮತದಿಂದಲೇ ನಡೆಸಬೇಕೆಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದ್ರೂ ವಿಜಯೇಂದ್ರ ಅವರನ್ನೇ ಮುಂದುವರೆಸುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಸ್ಪಷ್ಟತೆ ಕೊಟ್ಟಿಲ್ಲ.

Share This Article