ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಯತ್ನಾಳ್ ವಿರುದ್ಧ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ, ಬಡವರ ಪರವಾಗಿ ಕಳೆದ ಹಲವು ದಶಕಗಳಿಂದ ರಾಜ್ಯದ ಹತ್ತಾರು ಪ್ರಮುಖ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಯುವ ಸಮಾಜಕ್ಕೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ದಾರಿದೀಪವಾಗಿದ್ದಾರೆ. ಆದರೆ ಯತ್ನಾಳ್ ಅವರನ್ನು ಪಾಕಿಸ್ತಾನದ ಏಜೆಂಟ್ ಎಂದು ಕರೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಸಿಎಎ, ಎನ್‍ಆರ್ ಸಿ ವಿರೋಧಿಸಿದರು ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೊರೆಸ್ವಾಮಿ ಅವರನ್ನು ಅವಮಾನಿಸ್ದಾರೆ. ಪಾಕಿಸ್ತಾನದ ಏಜೆಂಟ್, ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೀಗಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ದೊರೆಸ್ವಾಮಿಯವರನ್ನು ನಿಂಧಿಸಿದ ಯತ್ನಾಳ್ ಮೇಲೆ ದಾಖಲಾಗಿರುವ ಪ್ರಕರಣಗಳ ವಿವಿಧ ಸೆಕ್ಷನ್‍ಗಳ ಪಟ್ಟಿಯ ಫೋಟೋವನ್ನು ಸಹ ಹಾಕಿದ್ದಾರೆ.
ಯತ್ನಾಳ್ ಹೇಳಿದ್ದೇನು?
ಮಂಗಳವಾರ ವಿಜಯಪುರದಲ್ಲಿ ಯತ್ನಾಳ್ ಅವರು ದೊರೆಸ್ವಾಮಿ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಮಾಧ್ಯಮಗಳ ಜೊತೆ ಮಾತನಾಡುತ್ತಾ, ದೇಶದ್ರೋಹಿ ಘೋಷಣೆ ಹಾಗೂ ಫೇಸ್‍ಬುಕ್ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಖಡಕ್ ವಾರ್ನಿಂಗ್ ನೀಡಿದ್ದರು. ದೇಶದ್ರೋಹಿಗಳಿಗೆ ಬೀಳುತ್ತವೆ ಗುಂಡೇಟು, ದೇಶದ್ರೋಹಿಗಳೇ ಹುಷಾರ್. ಇನ್ನು ಮುಂದು ಹಾಗೆಲ್ಲ ಮಾಡಿದರೆ ಗುಂಡೇಟು ಬೀಳುತ್ತವೆ. ಜೈಲಿಗೆ ಕಳುಹಿಸುವುದೆಲ್ಲ ಇಲ್ಲ, ಇನ್ಮೇಲೆ ದೇಶದ್ರೋಹದ ಹೇಳಿಕೆ ಕೊಟ್ಟರೆ ಅವರಿಗೆ ಗುಂಡು ಬೀಳುತ್ತೆ ಎನ್ನುವ ಮೂಲಕ ದೇಶದ್ರೋಹಿಗಳಿಗೆ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲದೇ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ. ಎಲ್ಲಿದ್ದಾನೆ ಆ ಮುತ್ಯಾ ಈಗ, ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್. ಪಾಕಿಸ್ತಾನ ಏಜೆಂಟ್ರಂತೆ ದೊರೆಸ್ವಾಮಿ ಮಾತಾಡ್ತಿದ್ದಾನೆ ಎಂದು ಕಿಡಿಕಾರಿದ್ದರು.