ವಿಜಯಪುರ: ಕಾಂಗ್ರೆಸ್ ಪಕ್ಷ ಬಿಡೋರ ಲಿಸ್ಟ್ ನನ್ನ ಬಳಿ ಇದೆ. ಹಾಗೇ ಬಿಜೆಪಿ ಬಿಡೋರ ಲಿಸ್ಟ್ ಕೂಡ ನನ್ನ ಬಳಿ ಇದೆ. ಕಾಲಕಾಲಕ್ಕೆ ಹೇಳ್ತೀನಿ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ 6 ತಿಂಗಳು ಇರುವಾಗ ಸಂಪುಟ ಪುನರ್ ರಚನೆ ಮಾಡಿದರೆ ನಾವ್ಯಾರು ಮಂತ್ರಿ ಆಗುವುದಿಲ್ಲ. ಆದಷ್ಟು ಬೇಗ ಸಂಪುಟ ಪುನರ್‍ರಚನೆ ವಿಶ್ವಾಸ ಇದೆ. ಸಿಎಂ ಪ್ರಧಾನಿಗಳನ್ನು ಭೇಟಿ ಮಾಡಬೇಕು. ಪಂಚರಾಜ್ಯ ಚುನಾವಣೆ ಇದೆ. ನಾಳೆ ಸಿಎಂ ದೆಹಲಿಗೆ ಹೊರಟಿದ್ದಾರೆ. ಚರ್ಚೆ ನಡೆಸಿ ಮಾಡಬಹುದು. ಯಾವಾಗ ಆಗುತ್ತೋ ಆಗಲಿ ಎಂದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ: ನಲಪಾಡ್ ಅಧಿಕಾರ ಸ್ವೀಕಾರ
6 ತಿಂಗಳು ಕಾದು ನೋಡಿ ಜಾದೂ ಹೇಗೆ ನಡೆಯುತ್ತದೆ. ಕಾಂಗ್ರೆಸ್‍ನಿಂದ ಪಕ್ಷ ಬಿಡುವವರ ಸಂಖ್ಯೆ ಈಗ ಹೇಳಲು ಆಗುವುದಿಲ್ಲ. ಕಾಂಗ್ರೆಸ್ ನಿಂದ ಸಿದ್ದರಾಮಯ್ಯರೇ ಬಿಟ್ಟರೆ ಅಚ್ಚರಿ ಇಲ್ಲ ಎಂದು ನಿನ್ನೆ ಹೇಳಿದ್ದೇನೆ. ಸಿದ್ದರಾಮಯ್ಯ ಮುಗಿಸುವುದು ಡಿಕೆಶಿ ಅವರ ಪಾದಯಾತ್ರೆಯ ಉದ್ದೇಶ. ಜನರಿಗಾಗಿ ಪಾದಯಾತ್ರೆ ಮಾಡುತ್ತಿಲ್ಲ. ದೇಶ ಆಳಿದ ಕಾಂಗ್ರೆಸ್ಸಿಗರು ಆಗ ಮೇಕೆದಾಟು, ಆಲಮಟ್ಟಿ ಹೋರಾಟ ಮಾಡಲಿಲ್ಲ. ಆವಾಗ ಕಾವೇರಿ ನ್ಯಾಯ ಬಗ್ಗೆ ಗಮನ ಹರಿಸಲಿಲ್ಲ. ಅಧಿಕಾರ ಅನುಭವಿಸಿ, ಲೂಟಿ ಮಾಡಿ ಮತ್ತೆ ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ಸಿಗರು 30 ವರ್ಷ ಮಾಡಿದ ಲೂಟಿ ಹಣವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಿದರೇ ಎಲ್ಲ ನೀರಾವರಿ ಯೋಜನೆ ಮುಗಿಯುತ್ತವೆ. ಇನ್ನು ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಹೀಗೆ ಮಾಡುತ್ತಿದೆ. ಜನರನ್ನು ಮರಳು ಮಾಡಲು ಹೀಗೆ ಮಾಡುತ್ತಿದ್ದಾರೆ. ಆದರೆ ಜನರು ಹುಚ್ಚರಲ್ಲ, ಅವರಿಗೂ ಎಲ್ಲ ತಿಳಿಯುತ್ತದೆ. ಕಾಂಗ್ರೆಸ್ ಯಶಸ್ವಿಯಾಗಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು
ರೇಣುಕಾಚಾರ್ಯ ಹೈಕಮಾಂಡ್‍ಗೆ ದೂರು ಕೊಟ್ಟರೇ ಅದು ಅವರ ವೈಯಕ್ತಿಕ. ನನಗೂ ಅದಕ್ಕೂ ಸಂಬಂಧ ಇಲ್ಲ. ಇನ್ನು ನಾನು ಯಾವ ಸಚಿವರ ವಿರುದ್ಧವು ದೂರು ಕೊಡಲ್ಲ. ನನ್ನ ಜೊತೆಗೆ ಎಲ್ಲ ಸಚಿವರು ಚೆನ್ನಾಗಿದ್ದಾರೆ. ಸಚಿವರು ಸಹಕಾರ ನೀಡಿದ್ದಾರೆ. ಹೋದಾಗ ಗೌರವ ಕೊಟ್ಟಿದ್ದಾರೆ. ನಾ ಹೇಳಿದಾಗ ಆದಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಯಾವ ಸಚಿವರ ಬಗ್ಗೆಯೂ ನನ್ನ ಆರೋಪ, ದೂರು ಇಲ್ಲ. ಇನ್ನು ಸಭೆಯಲ್ಲಿ ಸಚಿವರಿಗೆ ಸಲಹೆ ಕೊಡುವ ಅಧಿಕಾರ ಶಾಸಕರಿಗಿದೆ ಎಂದು ಹೇಳಿದ್ದಾರೆ.
125 ಕೋಟಿ ಅನುದಾನ ವಾಪಾಸ್ ಪಡೆದಾಗ ನಾನೇ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದ್ದೆ. ಅಭಿವೃದ್ಧಿ ವಿಚಾರದಲ್ಲಿ ಮಾತನಾಡುವುದು ಬೇರೆ. ಅಭಿವೃದ್ಧಿ ಕೆಲಸಗಳಿಗೆ ನ್ಯಾಯ ಸಿಗದೇ ಇದ್ದಾಗ ಹೋರಾಟ ಮಾಡುತ್ತೇವೆ. ಈಗ ಯಾವ ಸಚಿವರ ಬಗ್ಗೆಯೂ ನನ್ನ ಆರೋಪವಿಲ್ಲ. ಸಚಿವ ಸಂಪುಟ ಆದಷ್ಟು ಬೇಗನೆ ಪುನರಚನೆ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.