– ರಾಹುಲ್ ಗಾಂಧಿ ದೇಶದ ರಾಜಕೀಯ ಜೋಕರ್
– ಕಾಂಗ್ರೆಸ್‍ಗೆ ಸವಾಲು ಹಾಕಿದ ಶಾಸಕ ಯತ್ನಾಳ್
ವಿಜಯಪುರ: ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭ್ಯವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಬಹುದು. ಹೀಗಾಗಿ ಸಾಕಷ್ಟು ಬದಲಾವಣೆ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್ ಕೂಡ ಒಳ್ಳೆಯ ನಿರ್ಧಾರ ಕೈಗೊಳ್ಳಬಹುದು. ಶಾಸಕ ಉಮೇಶ್ ಕತ್ತಿ ಅವರು ಗುರುವಾರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ಕುರಿತು ನನ್ನ ಬಳಿ ಹೇಳಿದ್ದಾರೆ ಎಂದರು.
Advertisement
Advertisement
ಬಜೆಟ್ ಅಧಿವೇಶನದ ಬಳಿಕ ಸಚಿವರ ಮೌಲ್ಯಮಾಪನವಾಗಬೇಕು. ಆಗ ಅಸಮರ್ಥ ಸಚಿವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಬೇಕು. ಅಂತಹ ಸಚಿವರು ಗೌರವಯುತವಾಗಿ ಶಾಸಕರಾಗಿ ಉಳಿಯಬೇಕಾಗುತ್ತದೆ. ರಾಜ್ಯದ ಬೆಳವಣಿಗೆಗಳನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ. ಪ್ರತಿನಿತ್ಯದ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರ ಮೌಲ್ಯಮಾಪನ ಮಾಡುವಂತೆ ರಾಜ್ಯ ಸಚಿವರ ಮೌಲ್ಯಮಾಪನ ಮಾಡಬೇಕಿದೆ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಹೈಕಮಾಂಡ್ ಕಣ್ಣು ಮುಚ್ಚಿ ಕುಳಿತಿಲ್ಲ, ಎಲ್ಲವನ್ನೂ ಗಮನಿಸುತ್ತಿದೆ. ಸಿಎಂ ಯಡಿಯೂರಪ್ಪ ಅವರ ಸಂಪುಟವನ್ನು ಪುನಾರಚನೆ ಮಾಡಬೇಕು ಎಂಬ ಚರ್ಚೆಯಾಗುತ್ತಿದೆ ಎಂದು ತಿಳಿಸಿದರು.
Advertisement
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ:
ಪುಲ್ವಾಮಾ ದಾಳಿಯ ವಿಚಾರವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ್ ಅವರು, ರಾಹುಲ್ ಗಾಂಧಿ ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಪರಿಪಕ್ವತೆ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಈ ಮೂಲಕ ಅವರು ಸೈನಿಕರಿಗೆ ಅಪಮಾನ ಮಾಡಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: ಪುಲ್ವಾಮಾ ದಾಳಿಯಿಂದ ಲಾಭ ಆಗಿದ್ದು ಯಾರಿಗೆ: ರಾಹುಲ್ ಗಾಂಧಿ ಪ್ರಶ್ನೆ
ರಾಹುಲ್ ಗಾಂಧಿ ಒಬ್ಬ ಜೋಕರ್. ಅವರು ಕಾಂಗ್ರೆಸ್ ಜೋಕರ್ ಅಷ್ಟೇ ಅಲ್ಲ ದೇಶದ ರಾಜಕೀಯ ಜೋಕರ್. ರಾಹುಲ್ ಗಾಂಧಿ ಸೇರಿದಂತೆ ಕೆಲ ಕಾಂಗ್ರೆಸ್ಸಿಗರು ಪಾಕಿಸ್ತಾನದ ಏಜೆಂಟರ್ ಗಳಂತೆ ಮಾತನಾಡುತ್ತಾರೆ. ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ, ಪಾಕಿಸ್ತಾನ್ ರಾಷ್ಟ್ರೀಯ ಕಾಂಗ್ರೆಸ್ ಎಂದು ಜರಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಾಕಿಸ್ತಾನ ವಕ್ತಾರರಂತೆ ಮಾತನಾಡುತ್ತಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಿಟ್ಟರೆ ರಾಹುಲ್ ಗಾಂಧಿ ಅವರೇ ಭಾರತದ ವಿರೋಧಿ ಹೇಳಿಕೆ ನೀಡುವುದು ಎಂದು ವಾಗ್ದಾಳಿ ನಡೆಸಿದರು.
ಕಮ್ಯುನಿಸ್ಟರು ನಮ್ಮ ದೇಶಕ್ಕೆ ಕ್ಯಾನ್ಸರ್ ಇದ್ದಂತೆ. ಅವರಿಗೆ ನಮ್ಮ ದೇಶದ ಬಗ್ಗೆ ನಿಷ್ಠೆ ಇಲ್ಲ. ಅವರು ಚೀನಾದ ಎಜೆಂಟರ್ ಗಳು. ಧರ್ಮ, ಸಂಸ್ಕೃತಿ, ರಾಷ್ಟ್ರೀಯತೆ ಬಗ್ಗೆ ನಿಷ್ಠೆ ಇಲ್ಲ. ರಾಷ್ಟ್ರೀಯತೆ ಬಗ್ಗೆ ಕಮ್ಮಿ ನಿಷ್ಠೆ ಇರುವವರು ಕಮ್ಯುನಿಸ್ಟರು ಎಂದು ಹೇಳಿದರು.
ಕಾಂಗ್ರೆಸ್‍ಗೆ ಸವಾಲು:
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟರು ಪಾಲ್ಗೊಂಡಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ದೇಶ ವಿರೋಧಿ ಚಟುವಟಿಕೆಯಲ್ಲಿ ಕಮ್ಯುನಿಸ್ಟರ ಪಾತ್ರವಿದೆ. ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿ ಅವರ ಹತ್ಯೆಯ ಹೊಣೆ ಯಾರ ಮೇಲೆ ಹಾಕಬೇಕು? ಸಂಜಯ್ ಗಾಂಧಿ ಅಪಘಾತಕ್ಕೆ ಯಾರು ಹೊಣೆ? ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ವಿಷ ಹಾಕಿದ ಘಟನೆಗೆ ಯಾರು ಹೊಣೆ? ಸುಭಾಷ್‍ಚಂದ್ರ ಭೋಸ್ ಸಾವಿನ ಬಗ್ಗೆ ಸಂಶಯವಿದೆ. ಇದಕ್ಕೆ ಯಾರು ಹೊಣೆ? ಪುಲ್ವಾಮಾ ಘಟನೆಯ ಹೊಣೆ ಬಗ್ಗೆ ಪ್ರಶ್ನಿಸುವುದಾದರೇ ದೇಶದಲ್ಲಿ ನಡೆದ ಹಲವು ಘಟನೆಗಳ ಹೊಣೆಗಳಿಗೆ ಯಾರು ಎನ್ನುವುದನ್ನು ಕಾಂಗ್ರೆಸ್ ಹೇಳಲಿ ಎಂದು ಸವಾಲ್ ಹಾಕಿದರು.