KarnatakaLatestMain PostVijayapura

ನಾನು ಸತ್ತರೆ ಯತ್ನಾಳ್, ಪಿಎಸ್‌ಐ ಕಾರಣ: ಬಿಜೆಪಿ ಕಾರ್ಯಕರ್ತನ ಪೋಸ್ಟ್

Advertisements

-ಯತ್ನಾಳ್, ಅಪ್ಪು ಜಟಾಪಟಿ

ವಿಜಯಪುರ: ನಾನು ಸತ್ತರೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಪಿಎಸ್‌ಐ ಶರಣಗೌಡ ಪಾಟೀಲ್ ಕಾರಣ ಎಂದು ಬಾಬು ಜಗದಾಳೆ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಗಾಂಧಿಚೌಕ್ ಪೊಲೀಸ್ ಠಾಣೆಯ ಪಿಎಸ್‌ಐ ಶರಣಗೌಡರು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನನ್ನು ಥಳಿಸಿದ್ದಾರೆ. ಪಿಎಸ್‌ಐ ಶರಣಗೌಡ ಮತ್ತು ಶಾಸಕ ಯತ್ನಾಳ್ ಕಡೆಯವರು ಅಪಘಾತ ಮಾಡಿ ಕೊಲೆಗೈಯಲು ಸಂಚು ರೂಪಿಸಿದ್ದಾರೆ. ನನಗೆ ನ್ಯಾಯ ಬೇಕು ಎಂದು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

https://www.facebook.com/kiran.jagadale.355/videos/1296230770561539/

ಬಾಬು ಜಗದಾಳೆ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಪ್ತ ಕೂಡ ಹೌದು. ಇದೇ ಕಾರಣಕ್ಕೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಯತ್ನಾಳ್ ವಿರುದ್ಧ ಬಾಬು ಪೋಸ್ಟ್ ಹಾಕುತ್ತಿದ್ದರು. ಅಲ್ಲದೆ ಯತ್ನಾಳ್ ಬಿಜೆಪಿ ಸೇರ್ಪಡೆ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು.

ಕೆಲವು ದಿನಗಳ ಹಿಂದೆ ವಿಜಯಪುರ ನಗರದ ರಸ್ತೆ ದುರಸ್ಥಿ ಬಗ್ಗೆ ಯತ್ನಾಳ್ ವಿರುದ್ಧ ಬಾಬು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದೇ ಕಾರಣಕ್ಕೆ ಯತ್ನಾಳ್ ಪೊಲೀಸ್ ಠಾಣೆಗೆ ಬಾಬುನನ್ನು ಕರೆಸಿ ತಾಕೀತು ಮಾಡಿದ್ದಾರೆ ಎನ್ನಲಾಗುತ್ತಿದೆ.

ಪಿಎಸ್‌ಐ ಶರಣಗೌಡ ಹಾಗೂ ಯತ್ನಾಳ್ ಈ ರೀತಿ ಮಾಡಿದ್ದು ತಪ್ಪು. ನನಗೂ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿರೋಧಿ ಪೋಸ್ಟ್ ಗಳು ಬರುತ್ತವೆ. ಹಾಗಂತ ಅಧಿಕಾರ ಇದ್ದಾಗ, ಇಲ್ಲದಿದ್ದಾಗ ನಾನೆಂದೂ ಅವರ ವಿರುದ್ಧ ಏನು ಮಾಡಿಲ್ಲ. ಯತ್ನಾಳ್ ಅವರು ಪೊಲೀಸರ ಮೂಲಕ ದಬ್ಬಾಳಿಕೆ ನಡೆಸಿದ್ದರೆ ತಪ್ಪು. ಅಲ್ಲದೆ ಪೊಲೀಸರು ಕೂಡ ಈ ರೀತಿ ಯಾರದೋ ಒತ್ತಡಕ್ಕೆ ಹೀಗೆ ಮಾಡಬಾರದು ಎಂದು ಮಾಜಿ ಸಚಿವ ಅಪ್ಪಾಸಹೇಬ ಪಟ್ಟಣಶೆಟ್ಟಿ ತಮ್ಮ ಶಿಷ್ಯನ ಪರ ಬ್ಯಾಟಿಂಗ್ ಮಾಡಿದ್ದಾರೆ.

ನಾನೇನು ಸ್ಟಾರ್ ಕ್ಯಾಂಪೇನರ್ ಅಲ್ಲ. ಪಕ್ಷ ಮಹಾರಾಷ್ಟ್ರ ಚುನಾವಣೆಯ ಜವಾಬ್ದಾರಿ ನೀಡಿತ್ತು. ಅದನ್ನು ನಿಭಾಯಿಸಿದ್ದೆನೆ ಅಷ್ಟೆ. ನಾವು ಹೋದ ಕಡೆಯಲ್ಲೆಲ್ಲ ಬಹುತೇಕ ಬಿಜೆಪಿ ಜಯಗಳಿಸಿದೆ. ಯತ್ನಾಳ್ ಸ್ವಪಕ್ಷೀಯರ ವಿರುದ್ಧವೇ ಮಾತನಾಡುವುದು ತಪ್ಪು. ಇದನ್ನು ಪಕ್ಷದ ಹಿರಿಯರು ಗಮನಿಸುತ್ತಿದ್ದಾರೆ ಎಂದು ಯತ್ನಾಳ್ ಗೆ ಮತ್ತೆ ಟಾಂಗ್ ನೀಡಿದ್ದಾರೆ.

ಯತ್ನಾಳ್ ಹಾಗೂ ಅಪ್ಪು ಜಗಳ ಇದೀಗ ತಾರಕಕ್ಕೇರಿದ್ದು, ಮುಂದೆ ಯಾವ ಸ್ವರೂಪ ಪಡೆಯುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಅಲ್ಲದೆ ಇವರಿಬ್ಬರ ಜಗಳದಿಂದ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ.

Leave a Reply

Your email address will not be published.

Back to top button