ವಿಜಯಪುರ: ವರದಿ ತಿರಸ್ಕಾರ ಹಾಗೂ ಮಿಕ್ಕ ವಿಷಯವನ್ನು ಆಮೇಲೆ ಪರಿಶೀಲಿಸಿ. ಮೊದಲು ರಾಜ್ಯಕ್ಕೆ 5 ಸಾವಿರ ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಿ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಅಧಿಕಾರಿಗಳ ತಂಡದ ವರದಿ ತೆಗೆದುಕೊಂಡು ಏನು ಮಾಡುವುದು? ಖುದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಜನರ ಪರದಾಟವನ್ನ, ಕಷ್ಟವನ್ನ ಕಣ್ಣಾರೆ ನೋಡಿದ್ದಾರೆ. ಇಷ್ಟು ಸಾಕು ನಂತರ ರಾಜ್ಯದ ವರದಿ ಹಾಗೂ ಕೇಂದ್ರದ ವರದಿ ತರಿಸಿ ತಾಳೆ ಹಾಕಿ. ಮೊದಲು ಜನರಿಗೆ 5 ಸಾವಿರ ಕೋಟಿ ರೂ. ಪರಿಹಾರ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದರು. ಇದನ್ನೂ ಓದಿ:6 ವರ್ಷ ಕಾಂಗ್ರೆಸ್ ಲೂಟಿ ಮಾಡಿ ಎಲ್ಲ ರೀತಿಯಲ್ಲೂ ರಾಜ್ಯ ದಿವಾಳಿಯಾಗಿತ್ತು – ಸಿದ್ದುಗೆ ರವಿ ತಿರುಗೇಟು
ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ದಿವಾಳಿ ಎದ್ದಿಲ್ಲ. ಸಿಎಂ ಯಡ್ಡಿಯೂರಪ್ಪ ಅವರ ಜೊತೆ ಬೆಳಗ್ಗೆ ಮಾತನಾಡಿದ್ದೇನೆ, ನೆರೆ ಪರಿಹಾರಕ್ಕೆ ಕೊಡುವಷ್ಟು ಹಣ ಇಲ್ಲ. ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ ಎನ್ನುವ ಅರ್ಥದಲ್ಲಿ ಅವರು ಹೇಳಿಕೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ದಿವಾಳಿ ಆಗಿದ್ದರೆ ನಮ್ಮ ಕ್ಷೇತ್ರಕ್ಕೆ 300 ಕೋಟಿ ಅನುದಾನ ಹೇಗೆ ನೀಡುತ್ತಿದ್ದರು ಎಂದು ಪ್ರಶ್ನಿಸಿದರು. ಹಾಗೆಯೇ ಬಿಎಸ್‍ವೈ ಅವರಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಹಿಂದಿನವರು ಬೇಕಾಬಿಟ್ಟಿ ಸಾಲ ಮನ್ನಾ ಮಾಡಿ ದಿವಾಳಿ ಮಾಡಿದ್ದಾರೆ. 54 ಸಾವಿರ ಕೋಟಿ ರೂ. ಸಾಲ ಮನ್ನಾ ಎಂದು ಹೇಳಿ ಎಚ್‍ಡಿಕೆ ಓಡಿ ಹೋಗಿದ್ದಾರೆ. ಈಗ ಬಿಜೆಪಿ ಸರ್ಕಾರ ದಿವಾಳಿ ಮಾಡಿದೆ ಎಂದು ಸಿದ್ಧರಾಮಯ್ಯ ಹೇಳ್ತಾರೆ. ಅವರೆಲ್ಲ 6 ವರ್ಷ ಸೇರಿ ದಿವಾಳಿ ಮಾಡಿದ್ದಾರೆ. ಈಗ ಯಡಿಯೂರಪ್ಪ ಅವರು ಜಾದು, ಮಂತ್ರ ಮಾಡಲು ಬರಲ್ಲ ಎಂದು ಎಚ್‍ಡಿಕೆ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ:ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸುಮ್ಮನಿರಲ್ಲ – ತೇಜಸ್ವಿ ಸೂರ್ಯ ವಿರುದ್ಧ ಯತ್ನಾಳ್ ಕಿಡಿ
ರಾಜ್ಯ ಸರ್ಕಾರಕ್ಕೆ ತನ್ನ ಸೀಮಿತ ಕೆಲಸ ಮಾಡಲು ಹಣ ಇದೆ. ಪ್ರವಾಹದ ಒಟ್ಟು ಪರಿಹಾರ ಹಣ ಭರಿಸಲು ಆಗಲ್ಲ ಎನ್ನುವ ಭಾವನೆಯಿಂದ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ನೆರೆ ಪೀಡಿತ ಪ್ರದೇಶದ ಶಾಸಕರ ಮೇಲೆ ಜನರ ಒತ್ತಡವಿದೆ. ಶಾಸಕ ಆನಂದ ಮಾಮನಿ ಕೇಳಿದ್ದಕ್ಕೆ ಹಣದ ಕೊರತೆ ಇದೆ, ವ್ಯವಸ್ಥೆ ಮಾಡೋದಾಗಿ ಹೇಳಿದ್ದಾರಷ್ಟೇ ಎಂದು ಸಿಎಂ ಹೇಳಿಕೆಯನ್ನು ಯತ್ನಾಳ್ ಸಮರ್ಥಿಸಿಕೊಂಡರು. ಜೊತೆಗೆ ಕೇಂದ್ರ ಸರ್ಕಾರ ಕರ್ನಾಟಕದ ಜನರ ನೋವಿಗೆ ಸ್ಪಂದಿಸಿ ನೆರವಾಗುತ್ತೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.