ಬೆಳಗಾವಿ: ಔತಣಕೂಟ ಮಾಡಿ ಬೆನ್ನಿಗೆ ಚಾಕು ಹಾಕುವುದು ಅಲ್ಲ. ಇದರ ಹಿಂದೆ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರ ಕುತಂತ್ರ ಇದ್ದೇ ಇರುತ್ತದೆ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿಂದು (Belagavi) ಉಭಯ ನಾಯಕರ ಚರ್ಚೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಮತ್ತು ಮಾಜಿ ಸಿಎಂ ಬಿಎಸ್‌ವೈ ವಿರುದ್ಧ ಮತ್ತೆ ಹರಿಹಾಯ್ಡರು. ವಿಜಯೇಂದ್ರ ಔತಣಕೂಟಕ್ಕೆ ಆಹ್ವಾನಿಸಿದ್ದರು, ನಾನು ಹೋಗಿಲ್ಲ, ರಮೇಶ್ ಜಾರಕಿಹೊಳಿ ಸಹ ಹೋಗಲ್ಲ. ಇಲ್ಲಿ ಕರೆಯುತ್ತಾರೆ, ಆದ್ರೆ ದಾವಣಗೆರೆಯಲ್ಲಿ ಅವರ ಚೇಲಾಗಳನ್ನು ಬಿಟ್ಟು ಯಡಿಯೂರಪ್ಪ, ವಿಜಯೇಂದ್ರ ನಿರಂತರವಾಗಿ ಅಲ್ಲಿನ ಸಭೆಗಳನ್ನ ಮಾನಿಟರ್ ಮಾಡುತ್ತಿದ್ದಾರೆ. ಅವರ ಗನ್ ಮ್ಯಾನ್‌ಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಔತಣಕೂಟಕ್ಕೆ ಕರೆದು, ಬೆನ್ನಿಗೆ ಚಾಕು ಹಾಕುವುದು ಅಲ್ಲ. ನಾವು ಉತ್ತರ ಕರ್ನಾಟಕದವರು ಆ ರೀತಿ ಮಾಡಲ್ಲ. ಏನಿದ್ದರೂ ಏಕ್ ಮಾರ್ ದೋ ತುಕ್ಡಾ, ಎದುರಿಗೇ ಮಾತನಾಡ್ತೀವಿ ಎಂದು ಹೇಳಿದರು.ಇದನ್ನೂ ಓದಿ: ಮುರುಡೇಶ್ವರದಲ್ಲಿ ವಿದ್ಯಾರ್ಥಿನಿಯರ ದುರ್ಮರಣ – ಕುಟುಂಬಸ್ಥರಿಗೆ ಶಾಸಕ ಸಮೃದ್ಧಿ ಮಂಜುನಾಥ್ ಸಾಂತ್ವನ
Advertisement
Advertisement
ಯತ್ನಾಳ್ ಉಚ್ಚಾಟನೆ ಮಾಡಿ ಎಂದು ಯಡಿಯೂರಪ್ಪ ಸೇರಿ ಕೆಲ ಶಾಸಕರು ಮಾತಾಡಿದ್ದನ್ನು ಸ್ವತಃ ಮಾಜಿ ಶಾಸಕರೇ ನಮಗೆ ಮಾಹಿತಿ ನೀಡಿದ್ದಾರೆ. ಇವರು ವಯೋವೃದ್ಧ, ಯತ್ನಾಳ್ ನಮ್ಮವರೇ ಕೂತು ಬಗೆಹರಿಸಿಕೊಳ್ಳುತ್ತೀವಿ ಎನ್ನುತ್ತಾರೆ. ಇದರ ಹಿಂದೆ ಯಡಿಯೂರಪ್ಪ ಕುತಂತ್ರ ಯಾವಾಗಲೂ ಇದ್ದೇ ಇರುತ್ತದೆ. ಹಿಂದೆಯೂ ವಿಜಯೇಂದ್ರ ಇದೇ ರೀತಿ ಹೇಳಿಕೆ ಕೊಟ್ಟಿದ್ದ. ಯತ್ನಾಳ್ ವಿಪಕ್ಷ ನಾಯಕ, ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರಾಗೋಕೆ ನಮ್ಮದೇನು ತಕರಾರು ಇಲ್ಲ ಅಂದಿದ್ದರು. ಆದರೇ ಎರಡೇ ದಿನಕ್ಕೆ ರಾಜ್ಯಾಧ್ಯಕ್ಷರ ಘೋಷಣೆ ಆಯ್ತು. ಇವರು ಮ್ಯಾನೇಜ್ ಮಾಡುತ್ತಾರೆ, ಯಡಿಯೂರಪ್ಪರ ಈ ಹೇಳಿಕೆ ಹಿಂದೆ ದೊಡ್ಡ ಮ್ಯಾನೇಜ್ಮೆಂಟ್ ಇದೆ. ಆಮೇಲೆ ನಾವು ಮಾಡಿಲ್ಲ, ಹೈಕಮಾಂಡ್ ಮಾಡಿದೆ. ನಾನು ನಮ್ಮ ಮಗ ಇಬ್ಬರೂ ಪ್ರಾಮಾಣಿಕರು ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.
Advertisement
ಸಭೆ ಮಾಡಿದ್ದಕ್ಕೆ ನನ್ನ ಮೇಲೆ ಬಹಳ ವಿರೋಧ ಇದೆ ಎಂದು ವಿಜಯೇಂದ್ರ ಹೇಳುತ್ತಾನೆ. ಇವರದ್ದು ನಾಟಕದ ಕಂಪನಿ ಎಂದು ಗೊತ್ತಾಗುವುದಿಲ್ವಾ? ನಾವು 35-40 ವರ್ಷದಿಂದ ಯಡಿಯೂರಪ್ಪ ಜೊತೆಗೆ ಜೀವನ ಮಾಡಿದ್ದಲ್ವಾ? ಯಡಿಯೂರಪ್ಪ ಒಬ್ಬರೇ ಬಿಜೆಪಿ ಕಟ್ಟಿದ್ದಾರಾ? ನಾವೇ ಪೆಟ್ರೋಲ್ ಹಾಕಿ ಬಸ್‌ಗೆ ಟಿಕೆಟ್ ಕೊಡಿಸಿ ಕಳುಹಿಸಿ ಕೊಟ್ಟಿದ್ದಿವಿ. ಈಗ ಅವರ ಶಿಷ್ಯಂದಿರು ನಮಗೆ ಸೈಕಲ್ ಹೊಡೆದದ್ದು ಹೇಳುತ್ತಾರೆ. ಪಕ್ಷದಲ್ಲಿ ಸಂಘಟನೆ ಮಾಡಬೇಕಿದ್ದರೆ ದಾವಣಗೆರೆ ಸಭೆ ಮಾಡುತ್ತಿರಲಿಲ್ಲ. ಸ್ವತಃ ಯಡಿಯೂರಪ್ಪ ಮನೆಯಲ್ಲೇ ಭಿನ್ನಮತಿಯರ ಸಭೆ ಆಗುತ್ತದೆ. ರಾಜ್ಯಾಧ್ಯಕ್ಷ ಆ ಸಭೆಯಲ್ಲಿ ಪಾಲ್ಗೊಳ್ಳುತ್ತಾನೆ, ಇದು ಗುಂಪಿನ ನಾಯಕ ಎಂದು ಆಗ್ರಹಿಸಿದರು.
Advertisement
ನಾವು ಯಾವುದೇ ಜನ್ಮದಿನ ಹುಟ್ಟು ಹಬ್ಬ, ಪುಣ್ಯತಿಥಿ ಆಚರಣೆ ಮಾಡುವ ಕಾರ್ಯಕರ್ತರಲ್ಲ. ಹುಟ್ಟುಹಬ್ಬವನ್ನ ಅವರವರ ಮನೆಯಲ್ಲಿ ಮಾಡಿಕೊಳ್ಳಲಿ. ನಾನು ನನ್ನ ಸ್ವಂತ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳಲ್ಲ. ಮೊನ್ನೆ ನನ್ನ ಹುಟ್ಟುಹಬ್ಬದಂದು ಬೆಳಗ್ಗೆ 10ಕ್ಕೆ ಸದನದ ಒಳಗೆ ಹೋದರೆ ರಾತ್ರಿ 10ಕ್ಕೆ ಮನೆಗೆ ಹೋಗಿದ್ದೀನಿ. ಯಾರೋ ಒಬ್ಬ ಬಂದು ಹಾರ ಹಾಕಿದ. ಹುಟ್ಟುಹಬ್ಬ ಮಾಡಿಕೊಳ್ಳುವುದು ಜಿಲ್ಲಾ ಪಂಚಾಯತ್ ಚುನಾವಣೆಗೆ ಅನುಕೂಲ ಆಗುತ್ತದೆ ಎನ್ನುವುದೇನು ಇಲ್ಲ. ನಾವು ವಕ್ಫ್ ವಿಚಾರವಾಗಿ ಹೋರಾಟ ಮಾಡುತ್ತೇನೆ. ವಕ್ಫ್ನ ದೇಶದ್ಯಾಂತ ಕಿತ್ತು ಹಾಕಬೇಕು. ನಾವೂ ದಾವಣಗೆರೆಯಲ್ಲಿ ಸಮಾವೇಶ ಮಾಡ್ತೀವಿ. ಅವರ ಸಮಾವೇಶ ಮುಗಿದು ಒಂದು ವಾರದೊಳಗೆ ನಾವೂ ಸಮಾವೇಶ ಮಾಡ್ತೀವಿ. ನಮ್ಮ ಶಕ್ತಿ ಏನೂ ಅನ್ನೋದು ಅವರಿಗೆ ತೋರಿಸುತ್ತೇವೆ. ನಮ್ಮದು ಜನ ಶಕ್ತಿ, ಜನಪರ ಹೋರಾಟ. ಹುಟ್ಟುಹಬ್ಬದ ಹೋರಾಟ ಪುಣ್ಯ ತಿಥಿ ಹೋರಾಟ ಅಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಪಕ್ಷದ ಆಂತರಿಕ ವಿಚಾರ ನಾನು ಹೇಳುವುದಿಲ್ಲ. ಆದರೆ ಯಡಿಯೂರಪ್ಪ ಏನು ನಡೆಸಿದ್ದಾರೆಂಬ ಮಾಹಿತಿ ನಿಮಗೆ ಕೊಟ್ಟಿದ್ದೇನೆ. ಯಾವುದೇ ಮಾಜಿ ಶಾಸಕನ ಬಳಿ ಮಾತುಕತೆ ನಡೆಸಿಲ್ಲ ಎಂದು ಯಡಿಯೂರಪ್ಪ ಹೇಳಿಕೆ ಕೊಡಲಿ ನೋಡೋಣ ಎಂದು ಹೇಳಿದರು.
ಮಾಣಿಪ್ಪಾಡಿ ಆರೋಪದ ಬಗ್ಗೆ ಮಾತನಾಡಿ, ಅನ್ವರ್ ಮಾಣಿಪ್ಪಾಡಿ ಪ್ರಕರಣವನ್ನು ಸಿಬಿಐಗೆ ಕೊಡಲಿ ಎನ್ನುವುದೇ ನಮ್ಮ ವಾದ. ಒಬ್ಬ ಸಿಎಂ ಆಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಳುತ್ತಾರೆ. ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ. ಸಿಎಂ ಹತಾಶರಾಗಿದ್ದಾರೆ, ಬಿಜೆಪಿಯವರನ್ನ ಸಿಲುಕಿಸಬೇಕು ಎಂದುಕೊಂಡಿದ್ದಾರೆ. ತಾವೇ ಕೆಲವು ಜನಾಂಗದವರನ್ನ ಪ್ರಚೋದನೆ ಮಾಡುತ್ತಿದ್ದಾರೆ. ಆದರೆ ಈಗ ಬಿಜೆಪಿ ಮೇಲೆ ಸಿಎಂ ಸಿದ್ದರಾಮಯ್ಯಗೆ ಭಯ ಬಂದಿದೆ. ಸಿಬಿಐಗೆ ಪತ್ರ ಬರೆಯಲಿ, ಅವರೇ ತನಿಖೆ ಮಾಡುತ್ತಾರೆ. ನಿನ್ನೆ ಸದನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮುಖ ನೋಡಬಾರದಿತ್ತು. ವೀಡಿಯೋ ಅಂದಿದ್ದರೂ, ಆದರೆ ಆಡಿಯೋ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: `ಒಂದು ದೇಶ ಒಂದು ಚುನಾವಣೆ’ ಜಾರಿ ಅಗತ್ಯವಿದೆ – ಮಸೂದೆಗೆ ರಾಜ್ಯ ಬಿಜೆಪಿ ಸಂಸದರ ಬೆಂಬಲ