ಬೆಂಗಳೂರು: ಬಿಜೆಪಿಯಲ್ಲಿ ಬಣ ಬಡಿದಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಇದೀಗ ರೆಬೆಲ್ ಶಾಸಕ ಯತ್ನಾಳ್ ಬತ್ತಳಿಕೆಯಿಂದ ವಿಜಯೇಂದ್ರ ವಿರುದ್ಧ ಲಿಂಗಾಯತ ರಣಾಸ್ತ್ರ ಹೂಡಲಾಗಿದೆ. ಆ ಮೂಲಕ ಇಬ್ಬರ ನಡುವಿನ ನಾನಾ-ನೀನಾ ಸಂಘರ್ಷ ತೀವ್ರಗೊಂಡಿದೆ.
ಹೌದು, ವಿಜಯೇಂದ್ರ ವರ್ಸಸ್ ಯತ್ನಾಳ್ ಸಂಘರ್ಷಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಜಯೇಂದ್ರ ವಿರುದ್ಧ ಲಿಂಗಾಯತ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಶಾಸಕ ಯತ್ನಾಳ್. ಲಿಂಗಾಯತ ಮುಖಂಡರನ್ನು ಒಗ್ಗೂಡಿಸಿಕೊಂಡು ಹಿಂದೂ ಹುಲಿ ಸಮರ ತಾಲೀಮು ಆರಂಭಿಸಿದ್ದಾರೆ. ವಿಜಯೇಂದ್ರ ಪರ ಲಿಂಗಾಯತ ಸಮುದಾಯ ಇಲ್ಲ ಎಂಬ ಸಂದೇಶ ರವಾನೆಗೆ ಕಸರತ್ತು ಶುರುವಾಗಿದೆ. ಈ ಮೂಲಕ ಯಡಿಯೂರಪ್ಪ ನಿವೃತ್ತಿ ಬಳಿಕ ಲಿಂಗಾಯತ ನಾಯಕತ್ವ ಪಟ್ಟಕ್ಕೇರಲು ಯತ್ನಾಳ್ ಪ್ರಯತ್ನ ತೀವ್ರಗೊಳಿಸಿದ್ದಾರೆ.
Advertisement
ಒಂದು ಕಲ್ಲು ಎರಡು ಗುರಿ ಮೂಲಕ ವಿಜಯೇಂದ್ರ ವಿರುದ್ಧ ಯತ್ನಾಳ್ ಈ ಬಾರಿ ಬ್ರಹ್ಮಾಸ್ತ್ರವನ್ನೇ ಹೂಡಿದ್ದಾರೆ. ವಿಜಯೇಂದ್ರ ಹಠಾವೋ ಆಂದೋಲನ ತೀವ್ರಗೊಳಿಸುವುದು, ಲಿಂಗಾಯತರು ವಿಜಯೇಂದ್ರ ವಿರುದ್ಧ ಇದ್ದಾರೆಂಬ ಸಂದೇಶ ರವಾನಿಸೋದು ಯತ್ನಾಳ್ ಅವರ ಉದ್ದೇಶ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದರೆ ಲಿಂಗಾಯತರು ಒಗ್ಗೂಡುವುದಿಲ್ಲ. ವಿಜಯೇಂದ್ರ ಸಾರಥ್ಯದಲ್ಲಿ ಸಮುದಾಯ ಪಕ್ಷದ ಬೆಂಬಲಕ್ಕೆ ನಿಲ್ಲುವುದೂ ಅನುಮಾನ. ಸಮುದಾಯ ಚದುರಿ ಹೋಗಲಿದೆ. ಕಾಂಗ್ರೆಸ್ ಹೈಜಾಕ್ ಅಪಾಯವೂ ಇದೆ ಎಂದು ವರಿಷ್ಠರಿಗೆ ಮನದಟ್ಟು ಮಾಡಿಸುವ ಕಸರತ್ತು ನಡೆಸುತ್ತಿದ್ದಾರೆ ಯತ್ನಾಳ್. ಇದಕ್ಕಾಗಿ 100 ಜನ ಲಿಂಗಾಯತರ ನಿಯೋಗ ದೆಹಲಿಗೆ ಕೊಂಡೊಯ್ಯಲು ಯತ್ನಾಳ್ ಪ್ಲ್ಯಾನ್ ರೂಪಿಸಿದ್ದಾರೆ.
Advertisement
ಶಿವರಾತ್ರಿ ಬಳಿಕ ಸಾಧ್ಯವಾದರೆ ಈ ವಾರಾಂತ್ಯದಲ್ಲೇ ದೆಹಲಿ ಪರೇಡ್ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯೇಂದ್ರ ಬೆಂಬಲಕ್ಕೆ ಲಿಂಗಾಯತರು ಇಲ್ಲ ಅನ್ನೋದನ್ನ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ನಿಯೋಗ ಕೊಂಡೊಯ್ಯಲಾಗುತ್ತಿದೆ. ಈ ಬಾರಿ ಲಿಂಗಾಯತ ರಣಾಸ್ತ್ರ ಸಕ್ಸಸ್ ಆಗುತ್ತೆಂಬ ನಿರೀಕ್ಷೆಯಲ್ಲಿದೆ ಯತ್ನಾಳ್ ತಂಡ.