ನವದೆಹಲಿ: ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನು ಉಚ್ಛಾಟನೆ ಮಾಡಲಾಗಿದೆ.
ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್‌ಗೆ ಸರಿಯಾಗಿ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್ (BJP High Command) ಈ ನಿರ್ಧಾರವನ್ನು ಕೈಗೊಂಡಿದೆ. ತಕ್ಷಣವೇ ಈ ನಿರ್ಧಾರ ಜಾರಿಗೆ ಬಂದಿದ್ದು 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.
ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ನೋಟಿಸ್ ನೀಡಿತ್ತು. ನೋಟಿಸ್ ನೀಡಿದ್ದರೂ ಪದೇ ಪದೇ ಪಕ್ಷದ ವಿರೋಧಿ ಚಟುವಟಿಕೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದರು. ಕೊನೆಗೆ ಫೆ.10 ರಂದು ಶೋಕಾಸ್ ನೋಟಿಸ್‌ಗೆ ಯತ್ನಾಳ್ ಉತ್ತರ ನೀಡಿದ್ದರು. ಯತ್ನಾಳ್ ಉತ್ತರ, ಸ್ಪಷ್ಟನೆ ಒಪ್ಪದ ಕೇಂದ್ರ ಶಿಸ್ತು ಸಮಿತಿ ಇಂದು ಈ ನಿರ್ಧಾರ ಕೈಗೊಂಡಿದೆ.
ಯತ್ನಾಳ್ ನೇತೃತ್ವದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಠಾವೋವನ್ನು ಭಿನ್ನಮತಿಯರು ನಡೆಸುತ್ತಿದ್ದರು. ಪಕ್ಷದ ವಿಚಾರವನ್ನು ಹೊರಗಡೆ ಚರ್ಚಿಸಬೇಡಿ ಎಂದು ಬಿಜೆಪಿ ಸೂಚಿಸುತ್ತಿದ್ದರೂ ನಾಯಕರು ಪದೇ ಪದೇ ಉಲ್ಲಂಘನೆ ಮಾಡುತ್ತಿದ್ದಾರೆ.
ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಮಾ.25 ರಂದು ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಪಿ ಹರೀಶ್, ರೇಣುಕಾಚಾರ್ಯಗೆ ಶೋಕಾಸ್ ನೋಟಿಸ್ ನೀಡಿತ್ತು.