ಬೆಂಗಳೂರು: ಸಾಹಿತಿಗಳ ಹತ್ಯೆಗೆ ಸ್ಕೆಚ್ ಹಾಕ್ತಾರೆ ಅಂದ್ರೆ ನಮ್ಮ ದೇಶ ಯಾವ ಸ್ಥಿತಿಯಲ್ಲಿದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಎಂದು ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ಅಸಮಾಧಾನ ಹೊರಹಾಕಿದ್ದಾರೆ.
ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಾಹಿತಿ, ಇದೊಂದು ಸೌಜನ್ಯಯುತವಾದ ಭೇಟಿಯಾಗಿದ್ದು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಅಭಿನಂದಿಸಿದ್ದೇನೆ. ಇತ್ತ ಎಂ.ಎಂ.ಕಲಬುರ್ಗಿ ಹತ್ಯೆಯ ತನಿಖೆ ಯಾವುದೇ ಪ್ರಗತಿ ಕಂಡಿಲ್ಲ. ಹೀಗಾಗಿ ತನಿಖೆಯನ್ನು ತೀವ್ರಗೊಳಿಸುವಂತೆ ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.
Advertisement
ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಯಾರು ಎಂಬ ವಿಷಯ ಮುಖ್ಯ. ಆ ವ್ಯಕ್ತಿ ಯಾವ ಧರ್ಮಕ್ಕೆ ಸೇರಿದವನು ಅನ್ನೋದು ಮುಖ್ಯವಲ್ಲ. ಹಿಟ್ ಲಿಸ್ಟ್ ನಲ್ಲಿ ನನ್ನ ಹೆಸರು ಇರೋದರ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಸಿಕ್ಕಿದೆ. ನಾನು ಯಾರ ವಿರೋಧಿಯೂ ಅಲ್ಲ. ಅದು ಹಿಂದೂ ಆಗಿರಬಹುದು ಅಥವಾ ಮುಸ್ಲಿಂ ಆಗಿರಬಹುದು, ಕೋಮುವಾದವನ್ನು ನಾನು ವಿರೋಧಿಸುತ್ತೇನೆ. ಸದ್ಯ ನನ್ನ ಮನೆಯ ಬಳಿ ಒಬ್ಬ ಗನ್ ಮ್ಯಾನ್ ಇದ್ದಾರೆ. ಸೂಕ್ತ ಭದ್ರತೆ ನೀಡಿದ್ದಾರೆ ಎಂದು ಹೇಳಿದರು.