ಬರಗೂರು ಬರೆದ ಗದ್ಯದಲ್ಲಿ ಸೈನಿಕರಿಗೆ ಅವಮಾನವಾಗಿಲ್ಲ: ಮಂಗಳೂರು ವಿವಿ

Public TV
1 Min Read
mng vv book 2

ಬೆಂಗಳೂರು: ಬರಗೂರು ರಾಮಚಂದ್ರಪ್ಪನವರು ಬರೆದ ಪಾಠದಲ್ಲಿ ಸೈನಿಕರಿಗೆ ಅವಮಾನ ಮಾಡುವ ವಿಚಾರ ಉಲ್ಲೇಖವಾಗಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ, ಪಠ್ಯಪುಸ್ತಕ ಕಾರ್ಯನಿರ್ವಹಕ ಸಂಪಾದಕರಾಗಿರುವ ಡಾ. ನಾಗಪ್ಪ ಗೌಡ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಒಂದು ಪದವನ್ನು ನೋಡಿಕೊಂಡು ಸಂಪೂರ್ಣ ಗದ್ಯದ ಮೇಲೆ ಆರೋಪ ಎಸಗುವುದು ಸರಿಯಲ್ಲ. ಸೈನ್ಯಕ್ಕೆ ಸೇರಿದ್ದ ಗೆಳೆಯರೊಬ್ಬರ ಅಭಿಪ್ರಾಯವನ್ನು ಆಧಾರಿಸಿ ಈ ಪಠ್ಯವನ್ನು ಬರೆದಿದ್ದಾರೆ. ಪಠ್ಯದಲ್ಲಿ ಎಲ್ಲೂ ಭಾರತೀಯ ಸೇನೆ ಎಂದು ಉಲ್ಲೇಖವಾಗಿಲ್ಲ. ಇಡೀ ವಿಶ್ವದಲ್ಲಿ ಆಗುತ್ತಿರುವ ವಿಚಾರವನ್ನು ನೋಡಿಕೊಂಡು ಈ ಗದ್ಯವನ್ನು ಬರೆದಿದ್ದಾರೆ ಎಂದು ಅವರು ಹೇಳಿದರು.

ವೈಚಾರಿಕ ಲೇಖನವಾಗಿರುವ ಈ ಗದ್ಯದಲ್ಲಿ, ಯೋಧರಿಗೆ ಅವಮಾನ ಮಾಡುವ ಬರಹವನ್ನು ಬರಗೂರು ಅವರು ಬರೆದಿಲ್ಲ ಎಂದು ನಾಗಪ್ಪ ಗೌಡ ಸ್ಪಷ್ಟನೆ ನೀಡಿದರು.

ಏನಿದು ವಿವಾದ?: ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಯೋಧರಿಗೆ ಅವಮಾನ ಎಸಗುವ ಪಠ್ಯವನ್ನು ಬೋಧಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದ ‘ಯುದ್ಧ ಒಂದು ಉದ್ಯಮ’ ಎಂಬ ಗದ್ಯವನ್ನು ಈ ವರ್ಷದಿಂದ ಪ್ರಥಮ ವರ್ಷದ ಬಿಎಸ್ಸಿ ಮತ್ತು ಬಿಸಿಎ ಸೇರಿದಂತೆ ವಿವಿಧ ತರಗತಿಗಳಿಗೆ ಬೋಧಿಸಲಾಗುತ್ತಿದ್ದು, ಈ ಪಾಠದಲ್ಲಿ ಯೋಧರನ್ನು ಮತ್ತು ಯುದ್ಧವನ್ನು ಕೀಳಾಗಿ ಬಿಂಬಿಸಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಮೂಲಕ ಹೊರಬಂದ ಪುಸ್ತಕದಲ್ಲಿ ಯುದ್ಧ ಅಂದ್ರೆ ಒಂದು ಉದ್ಯಮ, ಗಡಿಭಾಗದಲ್ಲಿ ನಿರಂತರ ಅತ್ಯಾಚಾರಗಳು ನಡೆಯುತ್ತದೆ. ಇದರಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಭಾಗಿಯಾಗುತ್ತಾರೆ. ಅಲ್ಲದೆ ಯುದ್ಧದಲ್ಲಿ ಮಡಿದರೆ ಸ್ವರ್ಗದ ಬಾಗಿಲು ಮಾತ್ರವಲ್ಲ ದೇವತಾ ಸ್ತ್ರೀಯರು ಸ್ವಾಗತಕ್ಕಾಗಿ ಕಾಯುತ್ತಿರುತ್ತಾರೆ ಎಂಬ ಕಲ್ಪನೆ ಮೂಡಿಸಿ ಭ್ರಮೆ ಸೃಷ್ಠಿಸಲಾಗುತ್ತಿದೆ. ಯುವ ಮನಸ್ಸುಗಳಿಗೆ ಯುದ್ಧ ಮತ್ತು ದೇಶದ ಬಗ್ಗೆ ಕೀಳಾಗಿ ಬಿಂಬಿಸುವ ಪಾಠವನ್ನು ಬೋಧಿಸಲಾಗುತ್ತಿದೆ ಎಂದು ಪಠ್ಯದಲ್ಲಿ ಬರೆಯಲಾಗಿದೆ.

ಬರಗೂರು ಅವರ ಈ ಗದ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಪದಚಿತ್ತಾರ ಎಂಬ ಕನ್ನಡ ಪುಸ್ತಕದಲ್ಲಿ ಒಟ್ಟು 12 ಗದ್ಯಗಳಿದ್ದು ಬರಗೂರು ರಾಮಚಂದ್ರಪ್ಪ ಅವರದ್ದು 10ನೇ ಗದ್ಯವಾಗಿದೆ.

mng vv book 4

mng vv book 3

Share This Article
Leave a Comment

Leave a Reply

Your email address will not be published. Required fields are marked *