ಕೊಪ್ಪಳ: ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುವ ಮೂಲಕ ಬಾರ್ ತೆರೆಯುವುದಕ್ಕೆ ಮುಂದಾಗಿರುವ ಶಾಸಕರ ಪತ್ನಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಂಪಿ ಅರಣ್ಯ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಸಾಣಾಪೂರ-ವೀರೂಪಾಪೂರಗಡ್ಡಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಕಟ್ಟಡ ಕಟ್ಟುವಂತಿಲ್ಲ. ಇಲ್ಲಿ ಯಾವುದೇ ಕಟ್ಟಡ ಕಟ್ಟಬೇಕಾದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಿದೆ. ಆದರೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಪತ್ನಿ ತಬುಸಮ್ ಅರಣ್ಯ ಪ್ರದೇಶಕ್ಕೆ ಸೇರಿರೋ ಪ್ರದೇಶದಲ್ಲಿ ಅನುಮತಿ ಇಲ್ಲದೇ ಕಟ್ಟಡ ಕಟ್ಟಿ ಬಾರ್ ತೆರೆಯಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
Advertisement
ಈ ಹಿಂದೆ ನಮ್ಮ ಗ್ರಾಮದಲ್ಲಿ ಬಾರ್ ಇತ್ತು. ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೊಂದರೆ ಆಗುತ್ತಿದ್ದರಿಂದ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ನಮ್ಮ ಊರಿಗೆ ಮದ್ಯದ ಅಂಗಡಿ ಬೇಡ ಅಂತಾನೂ ಅಬಕಾರಿ ಇಲಾಖೆಗೆ ಹಾಗೂ ಗಂಗಾವತಿ ತಹಶಿಲ್ದಾರ್ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಆದರೂ ಕೂಡ ಶಾಸಕರ ಪತ್ನಿ ತಬುಸಾಮ್ ಮಾತ್ರ ಪತಿಯ ಅಧಿಕಾರದ ಪ್ರಭಾವ ಬಳಸಿಕೊಂಡು ಅರಣ್ಯದಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿದ್ದು ಜೊತೆಗೆ ಬಾರ್ ತೆರೆಯಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
ಸಾಣಾಪೂರ ಗ್ರಾಮಸ್ಥರು ಎಲ್ಲರೂ ಬಡವರು. ಕೂಲಿ ನಾಲಿ ಮಾಡಿ ದುಡಿದು ಕುಟುಂಬ ನಡೆಸುತ್ತಿದ್ದೇವೆ. ಆದರೆ ಬಾರ್ ಮತ್ತೆ ತೆರೆದರೆ ಕುಟುಂಬಗಳು ಬೀದಿಗೆ ಬೀಳುತ್ತವೆ. ಅಲ್ಲದೇ ತಿನ್ನೋ ಒಂದು ಹೊತ್ತು ಊಟಕ್ಕೂ ಪರದಾಡಬೇಕಾಗುತ್ತದೆ. ಹೀಗಾಗಿ ಬಾರ್ ತೆರೆಯುವುದು ಬೇಡ ಎಂದು ಆಗ್ರಹಿಸುತ್ತಿದ್ದಾರೆ.