ಜೈಲಿನಿಂದಲೇ ಫೈನಾನ್ಸ್ ನೀಡುತ್ತಿದ್ದವನ ಅಪಹರಣಕ್ಕೆ ಯತ್ನಿಸಿದ ಬೋಂಡ ಮಂಜ

Public TV
2 Min Read
ANE KINDNAP Main

ಬೆಂಗಳೂರು: ಜೈಲು ಸೇರಿದ ಮೇಲೆಯೂ ಬುದ್ಧಿ ಕಲಿಯದ ರೌಡಿ, ಅಲ್ಲಿಂದಲೇ ಫೈನಾನ್ಸ್ ನೀಡುತ್ತಿದ್ದ ವ್ಯಕ್ತಿಯ ಅಪಹರಣಕ್ಕೆ ಯತ್ನಿಸಿದ್ದಾನೆ.

ಬೆಂಗಳೂರಿನ ಕಗ್ಗಲೀಪುರ ಠಾಣಾ ವ್ಯಾಪ್ತಿಯ ಗುಳಕಮಲೆ ನಿವಾಸಿ ಮಂಜ ಅಲಿಯಾಸ್ ಬೋಂಡ ಮಂಜ ಪರಪ್ಪನ ಅಗ್ರಹಾರದಿಂದಲೇ ಕಿಡ್ನಾಪ್‍ಗೆ ಸಂಚು ರೂಪಿಸಿ ತನ್ನ ಚೇಲಾಗಳ ಮೂಲಕ ಅದನ್ನ ಕಾರ್ಯರೂಪಕ್ಕೆ ಸಹ ತಂದಿದ್ದಾನೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಸಿಕೆ ಪಾಳ್ಯದಲ್ಲಿ ಫೈನಾನ್ಸ್ ವ್ಯವಹಾರ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಗಳನ್ನು ಮಾಡಿಕೊಂಡಿದ್ದ ರವಿ ಎಂಬಾತನಿಗೆ ಬೋಂಡ ಮಂಜ ಹಣದ ಬೇಡಿಕೆ ಇಟ್ಟಿದ್ದ.

MONEY 3

ಹಣ ನೀಡಲು ರವಿ ನಿರಾಕರಿಸಿದ್ದರಿಂದ ಕಿಡ್ನ್ಯಾಪ್ ಸಂಚು ರೂಪಿಸಿದ್ದ. ಶನಿವಾರ ಸಂಜೆ ಕಾರ್ ಹಾಗೂ ದ್ವಿಚಕ್ರ ವಾಹನದಲ್ಲಿ ಬಂದ 6 ಜನರ ತಂಡ ರವಿಯನ್ನ ಅಪಹರಿಸಿ ಕನಕಪುರದ ಕಗ್ಗಲಿಪುರ ರಸ್ತೆಯತ್ತ ಎಳೆದೊಯ್ದಿದ್ದಾರೆ. ಬಳಿಕ ರವಿ ಬಳಿಯಿದ್ದ ಮೂರು ಸಾವಿರ ರೂಪಾಯಿ ಹಾಗೂ ಎಟಿಎಂನಲ್ಲಿದ್ದ ಮೂರುವರೆ ಸಾವಿರ ರೂಪಾಯಿಗಳನ್ನು ಕಿತ್ತುಕೊಂಡಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ತರುವಂತೆ ಹೆಂಡತಿಗೆ ಸೂಚಿಸುವಂತೆ ರವಿಗೆ ಬೆದರಿಕೆ ಹಾಕಿದ್ದರು.

ಆರೋಪಿಗಳ ಬೆದರಿಕೆಯಿಂದ ಭಯಗೊಂಡ ರವಿ ಪತ್ನಿಗೆ ಕರೆ ಮಾಡಿ ಹಣ ತರುವಂತೆ ಹೇಳಿದ್ದ. ಈ ಕುರಿತು ಮಾಹಿತಿ ಪಡೆದು ಕಾರ್ಯಪ್ರವೃತ್ತರಾಗಿದ್ದ ಬನ್ನೇರುಘಟ್ಟ ಪೊಲೀಸರು ಸಿಕೆ ಪಾಳ್ಯಕ್ಕೆ ತೆರಳಿ ರವಿ ಪತ್ನಿಯಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದರು. ಕಿಡ್ನಾಪರ್ಸ್ ಗೆ ಪೊಲೀಸರು ತಮ್ಮ ಬೆನ್ನುಹತ್ತಿರುವ ಬಗ್ಗೆ ಮಾಹಿತಿ ತಿಳಿದು ರವಿಯನ್ನು ನಾವು ಅಪಹರಣ ಮಾಡಿರುವ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂದು ಹೇಳಿ ಒಂದು ವಾರದ ಒಳಗೆ ಒಂದು ಲಕ್ಷ ರೂಪಾಯಿಯನ್ನು ತಂದುಕೊಡಬೇಕು ಎಂದು ಹೇಳಿಬಿಟ್ಟು ಕಳುಹಿಸಿದ್ದಾರೆ.

ANE KINDNAP B

ಮೂಲಗಳ ಮಾಹಿತಿ ಪ್ರಕಾರ ರವಿ ಕೂಡ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದು, ರೌಡಿಗಳ ಜೊತೆ ಆಗಾಗ ಪಾರ್ಟಿ ಮಾಡುತ್ತಿದ್ದ. ಇದರಿಂದಾಗಿ ರವಿ ಬಳಿ ಹಣ ಇರುವುದನ್ನು ತಿಳಿದಿದ್ದು ಜೈಲಿನಲ್ಲಿದ್ದು ಐಷಾರಾಮಿ ಜೀವನವನ್ನು ನಡೆಸಲು ಬೋಂಡ ಮಂಜ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಈ ಬಾರಿಯೂ ಸಹ ಹಣಕ್ಕಾಗಿ ಬೇಡಿಕೆ ಇಟ್ಟಾಗ ರವಿ ನಿರಾಕರಿಸಿದ್ದ. ಆದ್ದರಿಂದ ತನ್ನ ಸಹಚರರನ್ನು ಬಿಟ್ಟು ರವಿಯನ್ನು ಕಿಡ್ನಾಪ್ ಮಾಡಿ ಹಣ ವಸೂಲಿ ಮಾಡಲು ಮುಂದಾಗಿದ್ದ ಎಂದು ತಿಳಿದುಬಂದಿದೆ.

ಗ್ಯಾಂಗ್‍ನಲ್ಲಿದ್ದವರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿರುವ ಬನ್ನೇರುಘಟ್ಟ ಪೊಲೀಸರು ಅಪಹರಣಕಾರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಊರಿನಲ್ಲಿ ಫೈನಾನ್ಸ್ ವ್ಯವಹಾರ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಗಳನ್ನು ಮಾಡಿಕೊಂಡಿದ್ದ ರವಿ ಕೊನೆಗೂ ಈ ಕಿರಾತಕರ ಕೈಯಿಂದ ತಪ್ಪಿಸಿಕೊಂಡು ಬದುಕುಳಿದಿದ್ದಾನೆ.

Police jeep

Share This Article
Leave a Comment

Leave a Reply

Your email address will not be published. Required fields are marked *