41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

Public TV
2 Min Read
Uttarkashi Tunnel 4

ನವದೆಹಲಿ: ಕಳೆದ 17 ದಿನಗಳಿಂದ ಉತ್ತರಕಾಶಿ ಸುರಂಗದಲ್ಲಿ (Uttarkashi Tunnel) ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸಲಾಗಿದೆ. ವಿದೇಶಿ ಯಂತ್ರಗಳನ್ನು ತರಿಸಿಯೂ ಹಲವು ಪ್ರಯತ್ನಗಳನ್ನು ಮಾಡಿ ಅವುಗಳು ಕೈಕೊಟ್ಟ ಬಳಿಕ ಕೊನೆಗೆ ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ (Rat Hole Mining) ವಿಧಾನವೇ ಕೆಲಸಕ್ಕೆ ಬಂದಿದೆ.

ಹೌದು, ಅಮೆರಿಕದಿಂದ ಆಗರ್ ಯಂತ್ರವನ್ನು ತರಿಸಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಪ್ರಯತ್ನ ಪಡುತ್ತಿದ್ದ ವೇಳೆ ಯಂತ್ರವೇ ಕೆಟ್ಟುಹೋಗಿತ್ತು. ಇದಾದ ಬಳಿಕ ರಕ್ಷಣಾ ಕಾರ್ಯಾಚರಣೆ ಭಾರೀ ವಿಳಂಬವೂ ಆಯಿತು. ಇದೀಗ ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತವನ್ನು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ ವಿಧಾನದ ಮೂಲಕ ಪೂರ್ಣಗೊಳಿಸಲಾಗಿದೆ.

uttarkashi tunnel 2

ಏನಿದು ರ‍್ಯಾಟ್ ಹೋಲ್ ಮೈನಿಂಗ್?
ರ‍್ಯಾಟ್ ಹೋಲ್ ಮೈನಿಂಗ್ ಕೈಯಿಂದ ಕೊರೆಯುವ ವಿಧಾನವಾಗಿದೆ. ಇದನ್ನು ನುರಿತ ಕೆಲಸಗಾರರಷ್ಟೇ ಮಾಡುತ್ತಾರೆ. ಮೇಘಾಲಯದಲ್ಲಿ ಹೆಚ್ಚಾಗಿ ಕಾರ್ಮಿಕರು ಈ ರೀತಿ ಕೊರೆಯುತ್ತಾರೆ. ನೆಲದಲ್ಲಿ ಕಿರಿದಾದ ಹೊಂಡಗಳನ್ನು ಅಗೆದು, ಒಬ್ಬ ವ್ಯಕ್ತಿ ತೂರಿಕೊಂಡು ಹೋಗಲು ಸಾಧ್ಯವಾಗುವಷ್ಟೇ ಅಗಲದ ಹೊಂಡಗಳನ್ನು ಕೊರೆಯಲಾಗುತ್ತದೆ. ವ್ಯಕ್ತಿ ಹೊಂಡವನ್ನು ಕೊರೆದಂತೆ ಮುಂದೆ ಮುಂದೆ ಸಾಗುತ್ತಾ ಕಲ್ಲಿದ್ದಲನ್ನು ಸಂಗ್ರಹಿಸುತ್ತಾನೆ.

ರ‍್ಯಾಟ್ ಹೋಲ್ ಎಂದರೆ ಹೆಸರೇ ಹೇಳಿದಂತೆ ಇಲಿಗಳು ಕೊರೆಯುವಂತಹ ಕಿರಿದಾದ ಹೊಂಡಗಳು. ಹೊಂಡಗಳನ್ನು ಅಗೆದ ನಂತರ ಗಣಿಗಾರನು ಹಗ್ಗ ಮತ್ತು ಬಿದಿರಿನ ಏಣಿಗಳನ್ನು ಬಳಸಿ ಹೊಂಡದೊಳಗೆ ಇಳಿಯುತ್ತಾನೆ. ಈ ವಿಧಾನವನ್ನು ಸಾಮಾನ್ಯವಾಗಿ ಕಲ್ಲಿದ್ದಲನ್ನು ಹೊರತೆಗೆಯಲು ಬಳಸಲಾಗುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ವಿಧಾನವನ್ನು ಬಳಸಿ ಉಸಿರುಗಟ್ಟಿ, ಆಮ್ಲಜನಕದ ಕೊರತೆಯಿಂದ ಹಾಗೂ ಅಲ್ಲೇ ಸಿಲುಕಿ ಹಸಿವಿನಿಂದ ಜನರು ಸಾವನಪ್ಪಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.

Uttarkashi tunnel 1 1

ರ‍್ಯಾಟ್ ಹೋಲ್ ಮೈನಿಂಗ್‌ನಲ್ಲಿ ಮತ್ತೊಂದು ವಿಧವಿದೆ. ಇದರಲ್ಲಿ 10 ರಿಂದ 100 ಚದರ ಮೀಟರ್ ವರೆಗೆ ಬದಲಾಗುವ ಆಯತಾಕಾರದ ಹೊಂಡಗಳನ್ನು ಮಾಡಲಾಗುತ್ತದೆ. ಅದರ ಮೂಲಕ 100-400 ಅಡಿ ಆಳದ ಲಂಬವಾದ ಹೊಂಡವನ್ನು ಅಗೆಯಲಾಗುತ್ತದೆ. ಅದರಲ್ಲಿ ಕಲ್ಲಿದ್ದಲು ಕಂಡುಬಂದ ನಂತರ ರಂಧ್ರದ ಗಾತ್ರದ ಸುರಂಗಗಳನ್ನು ಅಡ್ಡಲಾಗಿ ಅಗೆಯಲಾಗುತ್ತದೆ. ಅದರ ಮೂಲಕ ಕಾರ್ಮಿಕರು ಕಲ್ಲಿದ್ದಲನ್ನು ಹೊರತೆಗೆಯುತ್ತಾರೆ.

ರ‍್ಯಾಟ್ ಹೋಲ್ ಮೈನಿಂಗ್ ಬ್ಯಾನ್ ಯಾಕೆ?
ರ‍್ಯಾಟ್ ಹೋಲ್ ಮೈನಿಂಗ್ ವಿಧಾನವು ಅದರ ಅಪಾಯಕಾರಿ ಕೆಲಸದ ಪರಿಸ್ಥಿತಿಗಳು, ಪರಿಸರ ಹಾನಿ ಮತ್ತು ಸಾವು ನೋವುಗಳಿಗೆ ಕಾರಣವಾಗುವ ಹಲವು ಅಂಶಗಳಿಂದಾಗಿ ತೀವ್ರ ಟೀಕೆಗಳನ್ನು ಎದುರಿಸಿದೆ. ಗಣಿಗಾರಿಕೆಗಳು ಸಾಮಾನ್ಯವಾಗಿ ಅನಿಯಂತ್ರಿತವಾಗಿದ್ದು, ಕಾರ್ಮಿಕರಿಗೆ ಸರಿಯಾದ ಗಾಳಿ, ರಚನಾತ್ಮಕ ಬೆಂಬಲ ಅಥವಾ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯವಹಿಸಲಾಗುತ್ತದೆ. ಮಾತ್ರವಲ್ಲದೇ ಈ ಹಳ್ಳದಲ್ಲಿ ಕಾರ್ಮಿಕರು ಇಳಿದ ಸಂದರ್ಭದಲ್ಲಿ ಮಳೆಯಾಗಿ, ಗಣಿಗಾರಿಕೆ ಪ್ರದೇಶದಲ್ಲಿ ನೀರು ನುಗ್ಗಿದ ಪರಿಣಾಮ ಅನೇಕ ಕಾರ್ಮಿಕರು ಅದರೊಳಗೆಯೇ ಪ್ರಾಣಬಿಟ್ಟಿರುವ ಅನೇಕ ನಿದರ್ಶನಗಳಿವೆ.

ಈ ರೀತಿಯ ಗಣಿಗಾರಿಕೆಯಿಂದಾಗಿ ಭೂಮಿಯ ಅವನತಿ, ಅರಣ್ಯನಾಶ ಮತ್ತು ಜಲ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) 2014 ರಲ್ಲಿ ರ‍್ಯಾಟ್ ಹೋಲ್ ಮೈನಿಂಗ್ ಅಭ್ಯಾಸವನ್ನು ನಿಷೇಧಿಸಿತು.

ರ‍್ಯಾಟ್ ಹೋಲ್ ಮೈನಿಂಗ್ ಅತ್ಯಂತ ಅಪಾಯಕಾರಿಯಾಗಿದ್ದು ಅನೇಕ ದೇಶಗಳಲ್ಲಿ ಇದನ್ನು ನಿಷೇಧಿಸಿದ್ದರೂ ಕೊನೆಗೆ ಅನಿವಾರ್ಯವಾಗಿ ಉತ್ತರಕಾಶಿಯ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಈ ವಿಧಾನವನ್ನು ಬಳಸಲಾಗಿದೆ. ಅನೇಕ ಜೀವಗಳಿಗೆ ಕುತ್ತಾಗಿದ್ದ ರ‍್ಯಾಟ್ ಹೋಲ್ ಮೈನಿಂಗ್ ವಿಧಾನವನ್ನು ಇದೀಗ ಅನೇಕ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, 41 ಕಾರ್ಮಿಕರನ್ನು ರಕ್ಷಣೆ ಮಾಡುವ ಮೂಲಕ ವರವಾಗಿ ಬಳಸಿಕೊಳ್ಳಲಾಗಿದೆ.

Share This Article