ಶಿವಮೊಗ್ಗ: ಇಲ್ಲಿನ ರಾಗಿಗುಡ್ಡದಲ್ಲಿ (Ragigudda) ಅಕ್ಟೋಬರ್ 1 ರಂದು ಈದ್ ಮಿಲಾದ್ ಹಬ್ಬದ ಮೆರವಣಿಗೆ ಆಯೋಜಿಸಲಾಗಿತ್ತು. ಸಂಜೆ ಮೆರವಣಿಗೆ ಆರಂಭವಾದ ನಂತರ ರಾಗಿಗುಡ್ಡದ ಶನೇಶ್ವರ ದೇವಸ್ಥಾನದ ಬಳಿ ಮೆರವಣಿಗೆ ಸಾಗುತ್ತಿದ್ದ ವೇಳೆ ಮೆರವಣಿಗೆಯಲ್ಲಿದ್ದವರ ಮೇಲೆ ಒಂದು ಕಲ್ಲು ತೂರಿ ಬಂದಿದೆ. ಇದರಿಂದ ರೊಚ್ಚಿಗೆದ್ದ ಮೆರವಣಿಗೆಯಲ್ಲಿ ಇದ್ದವರು ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದರು. ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ಮನೆಗಳ ಮೇಲೆ ದಾಳಿ ನಡೆಸಿದ್ದರು. ವಾಹನಗಳ ಜಖಂಗೊಳಿಸಿದ್ದರು. ಘಟನೆಯಲ್ಲಿ 7 ಮಂದಿ ನಾಗರಿಕರು ಸೇರಿದಂತೆ ಪೊಲೀಸರು ಗಾಯಗೊಂಡಿದ್ದರು.
ಘಟನೆ ಬಳಿಕ ಸ್ಥಳದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 27 ಎಫ್‍ಐಆರ್ ದಾಖಲಿಸಿ, 65 ಮಂದಿಯನ್ನು ಬಂಧಿಸಿದ್ದು, ಬಂಧಿತರನ್ನು ಚಿತ್ರದುರ್ಗ, ಬಳ್ಳಾರಿ ಹಾಗೂ ಕಲಬುರಗಿ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಬಿಜೆಪಿ (BJP) ಈ ಹಿಂದಿನಿಂದಲೂ ಆರೋಪಿಸುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಈ ಘಟನೆ ಹಿಂದೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕಾರ್ಯಕರ್ತರ ಕೈವಾಡ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೊಡಲಿಯಿಂದ ಹಲ್ಲೆಗೈದು ಹೊರಹಾಕಿ ಮನೆಯೊಳಗೆ ಮಲಗಿದ- ಬೆಳಗೆದ್ದು ನೋಡಿದಾಗ ಪತ್ನಿ ಸಾವು
ಪೊಲೀಸರ ತನಿಖೆ ವೇಳೆ ನಿಷೇಧಿತ ಪಿಎಫ್ ಐ (PFI) ಕಾರ್ಯಕರ್ತರ ಹೆಸರು ಕೇಳಿ ಬಂದಿದೆ ಎನ್ನಲಾಗಿದೆ. ಪೊಲೀಸರ ತನಿಖೆ ವೇಳೆ 8 ಮಂದಿ ಪಿಎಫ್ ಐ ಕಾರ್ಯಕರ್ತರ ಹೆಸರು ಬಹಿರಂಗಗೊಂಡಿದ್ದು, ಮೌಸಿನ್, ನಬಿ, ಮುಬಾರಕ್, ಇಮ್ರಾನ್, ಅಬ್ದುಲ್, ಹಿದಾಯತ್, ಇರ್ಫಾನ್, ಅನ್ವರ್ ಈ ಎಂಟು ಮಂದಿ ನಿಷೇಧಿತ ಪಿಎಫ್ ಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಅಲ್ಲದೇ ರಾಗಿಗುಡ್ಡದಲ್ಲಿ ಗಲಭೆ ನಡೆಯಲು ಯುವಕರಿಗೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ. ಪೊಲೀಸರು ಈಗಾಗಲೇ ಮೂರು ಮಂದಿಯನ್ನು ವಶಕ್ಕೆ ಪಡೆದಿದ್ದು, ಉಳಿದವರಿಗೆ ತಲಾಶ್ ನಡೆಸಿದ್ದಾರೆ. ಘಟನೆ ಹಿಂದೆ ಪಿಎಫ್ ಐ ಕೈವಾಡ ಇರುವ ಕಾರಣ ಈ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸುವಂತೆ ಮಾಜಿ ಸಚಿವ ಈಶ್ವರಪ್ಪ ಆಗ್ರಹಿಸಿದ್ದಾರೆ.
ಒಟ್ಟಾರೆ ಘಟನೆ ನಂತರ ಪೊಲೀಸರು ಎಚ್ಚೆತ್ತುಕೊಂಡಿದ್ದು, ತಲೆಮರೆಸಿಕೊಂಡಿರುವ ನಿಷೇಧಿತ ಪಿಎಫ್ ಐ ಕಾರ್ಯಕರ್ತರ ಬಂಧನಕ್ಕೆ ಎರಡು ತಂಡ ರಚಿಸಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಆರೋಪಿಗಳ ಪತ್ತೆ ನಂತರ ಮತ್ತಷ್ಟು ವಿಚಾರಗಳು ಬಹಿರಂಗಗೊಳ್ಳುತ್ತವೆಯಾ ಎಂಬುದನ್ನು ಕಾದು ನೋಡಬೇಕಿದೆ.
Web Stories