– ನಗರ ನಕ್ಸಲರು ಈ ಘಟನೆಯನ್ನೇಕೆ ಖಂಡಿಸ್ತಿಲ್ಲ ಎಂದ ವಿಪಕ್ಷ ನಾಯಕ
ಬೆಂಗಳೂರು: ರಾಜ್ಯದಲ್ಲಿ ದೇಶ ವಿರೋಧಿ ಶಕ್ತಿಗಳು ಹೆಚ್ಚಾಗುತ್ತಿವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದಲ್ಲಿ (Nagamangala Riot) ಸರ್ಕಾರ ಓಲೈಕೆ ರಾಜಕಾರಣ ನಡೆಸುತ್ತಿದೆ. ಮೊದಲ 25 ಜನರು ಹಿಂದೂಗಳ ಹೆಸರೇ ಇದೆ. ಇತ್ತ ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ್ದಾರೆ. ಈ ಸರ್ಕಾರ ಬಂದ ನಂತರ ಭಯವೇ ಇಲ್ಲದಂತಾಗಿದೆ. ಇದನ್ನೆಲ್ಲ ನೋಡಿದರೆ ರಾಜ್ಯದಲ್ಲಿ ದೇಶ ವಿರೋಧಿ ಶಕ್ತಿಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ.
ಕಳೆದ 15 ತಿಂಗಳಿಂದ ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ. ಸಿಎಂ, ಡಿಸಿಎಂ ತಮ್ಮದೇ ಗೊಂದಲಗಳಲ್ಲಿ ಸಿಕ್ಕಿಕೊಂಡಿದ್ದಾರೆ. ರಾಜ್ಯದಲ್ಲಿ ಭಯೋತ್ಪಾದಕರ ಅಟ್ಟಹಾಸ ನಡೀತಿದೆ ಎಂದು ಕಿಡಿಕಾರಿದ್ದಾರೆ.
ನಾಗಮಂಗಲ ಗಲಭೆಯಲ್ಲಿ ನಲ್ಲಿ ಹಿಂದೂಗಳ ಮೇಲೆ ಹೆಚ್ಚು ಕೇಸ್ ಹಾಕಲಾಗಿದೆ. ಗಲಭೆಯಲ್ಲಿ ಪಿಎಫ್‍ಐ ಲಿಂಕ್ ಇದ್ದವರೂ ಇದ್ದರು ಎನ್ನಲಾಗಿದೆ. ಅವರನ್ನು ಕೇರಳದಿಂದ ಕರೆಸುವ ಕೆಲಸವನ್ನು ಕಿಡಿಗೇಡಿ ಮುಸ್ಲಿಮರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳೂರಿನಲ್ಲೂ ಕೋಮುಗಲಭೆ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ರಾಜಾರೋಷವಾಗಿ ಘೋಷಣೆ ಕೂಗುತ್ತಾ ಹೋಗಿದ್ದಾರೆ. ಈ ಸರ್ಕಾರ ಬಂದ ಮೇಲೆ ಭಯೋತ್ಪಾದಕರಿಗೆ, ಪಿಎಫ್‍ಐನವ್ರಿಗೆ ಭಯ ಇಲ್ಲದಂತಾಗಿದೆ. ಒಂದು ಕಡೆ ರಾಹುಲ್ ವಿದೇಶಗಳಲ್ಲಿ ಭಾರತ ಬಗ್ಗೆ ಟೀಕೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಾಗಮಂಗಲ, ಮಂಗಳೂರು, ಚಿಕ್ಕಮಗಳೂರು ಘಟನೆಗಳಿಂದ ಮತ್ತೆ ಕಾಂಗ್ರೆಸ್ ವಿಭಜನೆ ಕೆಲಸಕ್ಕೆ ಮುಂದಾಗಿದೆ. ಪ್ರಗತಿಪರರು, ನಗರ ನಕ್ಸಲರು ಕಾಂಗ್ರೆಸ್‍ಗೆ ಕುಮ್ಮಕ್ಕು ಕೊಡ್ತಿದ್ದಾರೆ. ಈ ಪ್ರಗತಿಪರರು, ನಗರ ನಕ್ಸಲರು ಯಾಕೆ ಈ ಘಟನೆಗಳನ್ನು ಖಂಡಿಸ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.
ನಾಗಮಂಗಲ ಗಲಭೆಗೆ ಬಾಂಬ್ ತಯಾರಿಕೆಗೆ ಕಚ್ಚಾ ವಸ್ತು, ಜಾಗ ಕೊಟ್ಟಿದ್ದು, ಎಲ್ಲಿ ಇದನ್ನು ತಯಾರು ಮಾಡಿದ್ರು? ಇಲ್ಲಿನ ಮಸೀದಿಗಳಲ್ಲಿ ತಯಾರಿಸಿದ್ರಾ? ಅಥವಾ ಹೊರಗಿಂದ ತಂದಿದ್ರಾ? ದೇಶದ ಭದ್ರತೆ ದೃಷ್ಟಿಯಿಂದ ಮಂಗಳೂರು, ಚಿಕ್ಕಮಗಳೂರು, ನಾಗಮಂಗಲ ಘಟನೆಗಳ ತನಿಖೆಯನ್ನು ಎನ್‍ಐಎಗೆ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.