– ಮಕ್ಕಳ ಆರೋಗ್ಯಕ್ಕೆ ಕುತ್ತು ತರಬೇಡಿ
– ಚಾಕಲೇಟ್ ಮದ್ಯ ಮಿಶ್ರಣ
ಬೆಂಗಳೂರು: ಫಾರೀನ್ ಚಾಕಲೇಟ್ ತಿನ್ನೋ ಮುನ್ನ ಹುಷಾರಾಗಿರಿ. ದುಬಾರಿ ಆಗಿರುವ ವಿದೇಶಿ ಚಾಕಲೇಟ್ ನೀಡಿ ಸರ್ಪ್ರೈಸ್ ಕೊಡುವ ಬರದಲ್ಲಿ ಮಕ್ಕಳ ಆರೋಗ್ಯಕ್ಕೆ ಕುತ್ತು ತರಬೇಡಿ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಬ್ಯಾನ್ ಆಗಿರೋ ಲಿಕ್ಕರ್ ಚಾಕಲೇಟ್‍ಗಳು ಮಾರಾಟವಾಗುತ್ತಿದೆ.
ಹೌದು. ವೀಕೆಂಡ್ ಬಂತೆಂದರೆ ಸಾಕು ಮಮ್ಮಿ ಆ ಮಾಲ್‍ಗೆ ಹೋಗೋಣ, ಡ್ಯಾಡಿ ಈ ಮಾಲ್‍ಗೆ ಹೋಗೋಣ ಎಂದು ಪೀಡಿಸಿ ಸಿಲಿಕಾನ್ ಸಿಟಿ ಮಕ್ಕಳು ಮಾಲ್‍ಗಳಲ್ಲೇ ಏಂಜಾಯ್ ಮಾಡುತ್ತಾರೆ. ಅಲ್ಲಿ ಸಿಗುವ ಫಾರೀನ್ ಚಾಕಲೇಟ್ ಎಂದರೆ ಮಕ್ಕಳಿಗೆ ಸಖತ್ ಇಷ್ಟ. ಆದ್ರೆ ಈ ಚಾಕಲೇಟ್ ಕೊಡಿಸೋ ಮುನ್ನ ಪೋಷಕರು ನೂರು ಬಾರಿ ಯೋಚಿಸಿಬೇಕಾಗಿದೆ. ಯಾಕೆಂದರೆ ನೀವು ಕೊಡಿಸೋ ಕೆಲವು ಫಾರಿನ್ ಚಾಕಲೇಟ್‍ನಲ್ಲಿ ಅಲ್ಕೋಹಾಲ್ ಮಿಕ್ಸ್ ಆಗಿರುತ್ತದೆ. ಇದು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.
Advertisement
Advertisement
ಗಾರ್ಡನ್ ಸಿಟಿಯ ಬಹುತೇಕ ಎಲ್ಲಾ ಮಾಲ್‍ಗಳಲ್ಲೂ ಆಲ್ಕೊಹಾಲ್ ಮಿಕ್ಸ್ ಆಗಿರೋ ಚಾಕಲೇಟ್ ಲಭ್ಯವಿದೆ. ಅದರಲ್ಲೂ 1%, 1.4%, 1.6% ಆಲ್ಕೋಹಾಲ್ ಕಂಟೆಟ್‍ಗಳಿವೆ. ಇವುಗಳು ವೈನ್, ಬ್ರಾಂಡಿ, ರಮ್, ಬ್ರೀಜರ್ ಗಳ ಟೆಸ್ಟ್ ಮತ್ತು ಸ್ಮೆಲ್ ಹೊಂದಿವೆ. ವೈನ್‍ನಲ್ಲಿ 15-20%, ಬಿಯರ್‍ನಲ್ಲಿ 5-10%, ಬ್ರೀಜರ್‍ನಲ್ಲಿ 8-10% ಮದ್ಯದ ಅಂಶವಿರುತ್ತದೆ. ಈ ಎಲ್ಲಾ ವಿಧದ ಮದ್ಯದ ಅಂಶಗಳನ್ನು ಹೊಂದಿರುವ ಚಾಕಲೇಟ್‍ಗಳನ್ನು ಲಿಕ್ಕರ್ ಚಾಕೊಲೇಟ್ ಎಂದು ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಕಾರಣಕ್ಕೆ ಇವುಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬ್ಯಾನ್ ಮಾಡಿದೆ. ಆದರೂ ಕೂಡ ಬೆಂಗಳೂರಿನೆಲ್ಲೆಡೆ ರಾಜಾರೋಷವಾಗಿ ಬ್ಯಾನ್ ಆಗಿರುವ ಚಾಕಲೇಟ್ ಮಾರಾಟ ಮಾಡಲಾಗುತ್ತಿದೆ.
Advertisement
Advertisement
ಈ ಬಗ್ಗೆ ಅಂಗಡಿ ಮಾಲೀಕರನ್ನ ಕೇಳಿದಾಗ ಕಿಕ್ ಕೊಡುತ್ತೆ, ಎರಡು ಸಿಗರೇಟ್ ಸೇದಿದಾಗ ಆಗೋ ಮಜಾ ಇದರಿಂದ ಸಿಗುತ್ತೆ. ಇದಕ್ಕೆ ಸಖತ್ ಬೇಡಿಕೆಯಿದೆ. ಗ್ರಾಹಕರು ಇದನ್ನೇ ಹೆಚ್ಚು ಖರೀದಿಸುತ್ತಾರೆ ಅದಕ್ಕೆ ಮಾರುತ್ತೇವೆ ಎಂದು ಹೇಳುತ್ತಾರೆ.
ಲಿಕ್ಕರ್ ಚಾಕಲೇಟ್ ಬಗ್ಗೆ ಆಹಾರ ತಜ್ಞರನ್ನು ಕೇಳಿದಾಗ, ಇದೊಂದು ಚಿಕ್ಕ ಮಕ್ಕಳಿಗೆ ವಿಷ ಹಾಕುವ ಹುನ್ನಾರ. ಇವುಗಳನ್ನು ಮಾರುವಂತಿಲ್ಲ. ಇವುಗಳ ಮೂಲಕ ದೊಡ್ಡ ದೊಡ್ಡ ಆಲ್ಕೊಹಾಲ್ ಕಂಪನಿಗಳು ತನ್ನ ಬ್ರಾಡ್‍ನ್ನು ಮಕ್ಕಳಿಗೆ ಪರಿಚಯಿಸತ್ತಿವೆ. ಇದರಿಂದ ಮಕ್ಕಳು ಭವಿಷ್ಯದ ಕುಡುಕರಾಗುವುದು ಗ್ಯಾರಂಟಿ. ದೊಡ್ಡ ದೊಡ್ಡ ವಿಸ್ಕಿ ಕಂಪನಿಗಳು ತಮ್ಮ ಆಲ್ಕೋಹಾಲ್ ಟೆಸ್ಟ್‍ನ್ನು ಹೀಗೆ ಸಣ್ಣದಾಗಿ ಮಕ್ಕಳಿಗೆ ಪರಿಚಯಿಸುತ್ತವೆ ಎಂದು ತಿಳಿಸಿದ್ದಾರೆ.
ಲಿಕ್ಕರ್ ಚಾಕಲೇಟ್‍ಗಳನ್ನು ನೋಡಿಯೇ ವೈದ್ಯರು ಹೌಹಾರಿದ್ದಾರೆ. ಇಂಥ ಚಾಕ್ಲೇಟ್ ಡೇಂಜರಸ್. ಇವುಗಳನ್ನು ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 15 ರಿಂದ 25 ವರ್ಷದ ಒಳಗಿನ ಮಕ್ಕಳಲ್ಲಿ ಈ ಚಾಕೊಲೇಟ್ ಅಡಿಕ್ಷನ್ ಹೆಚ್ಚು, ಹೀಗಾಗಿ ಇದನ್ನು ಸೇವಿಸುವುದರಿಂದ ಮಕ್ಕಳ ಲಿವರ್, ಕಿಡ್ನಿ ಡ್ಯಾಮೇಜ್ ಆಗುತ್ತೆ. ಡಯಾಬಿಟಿಸ್, ಲಿವರ್ ಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗುತ್ತದೆ. ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಜೊತೆಗೆ ಹಲ್ಲು, ವಸಡು ಸಮಸ್ಯೆ ಬರುತ್ತದೆ. ಹೀಗೆ ಹತ್ತು ಹಲವು ದುಷ್ಪರಿಣಾಮಗಳು ಎದುರಿಸಬೇಕಾಗತ್ತದೆ.
ಈ ಬಗ್ಗೆ ತಿಳಿದಿದ್ದರೂ, ಲಿಕ್ಕರ್ ಚಾಕಲೇಟ್ ಬ್ಯಾನ್ ಆಗಿದ್ದರೂ ಪ್ರತಿಷ್ಠಿತ ಮಾಲ್‍ಗಳಲ್ಲಿ ಇದನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಗೊತ್ತಿದ್ದರೂ ಯಾಕೆ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎನ್ನುವುದು ಗೊತ್ತಿಲ್ಲ. ಯಾವುದಕ್ಕೂ ನಿಮ್ಮ ಮಕ್ಕಳಿಗೆ ಮಾಲ್‍ಗಳಲ್ಲಿ ವಿದೇಶಿ ಚಾಕಲೇಟ್ ಗಳನ್ನು ನೀಡುವ ಮುನ್ನ ಮುನ್ನ ಎಚ್ಚರವಹಿಸಿ.