ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜನ ತಾಯಿ ವಿಲಾಸಿನಿ ಶೆಟ್ಟಿಗಾರ್ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಇಂದು ಅಂತ್ಯಸಂಸ್ಕಾರ ನಡೆದಿದೆ. ಬನ್ನಂಜೆ ರಾಜ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ತಾಯಿಯ ಅಂತಿಮ ವಿಧಿವಿಧಾನ ಮತ್ತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾನೆ.
ಉಡುಪಿಯ ಕಲ್ಮಾಡಿಯಲ್ಲಿರುವ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದ ವಿಲಾಸಿನಿ ಶೆಟ್ಟಿಗಾರ್ಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಬಳಿಕ ಬನ್ನಂಜೆ ರಾಜಾ ಕುಟುಂಬಸ್ಥರು ಉಡುಪಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದು, ರಾಜನನ್ನು ಒಂದು ದಿನದ ಮಟ್ಟಿಗೆ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಪರವಾನಿಗೆ ಪಡೆಯುವುದರಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಭೂಗತ ಪಾತಕಿ ಬನ್ನಂಜೆ ರಾಜನ ತಾಯಿ ನಿಧನ
Advertisement
Advertisement
ಬನ್ನಂಜೆ ರಾಜ ಕಳೆದ ರಾತ್ರಿ ಉಡುಪಿ ನಗರ ಠಾಣೆಗೆ ಬಂದಿದ್ದನು. ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಲ್ಮಾಡಿಯ ಮನೆಗೆ ಕರೆತರಲಾಗಿದ್ದು, ಮನೆಯಲ್ಲಿ ನಡೆದ ಅಂತಿಮ ವಿಧಿವಿಧಾನದಲ್ಲಿ ಬನ್ನಂಜೆ ರಾಜ ಮಗನಾಗಿ ಮಾಡಬೇಕಾಗ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದಾನೆ. ಅಂತಿಮ ಯಾತ್ರೆಯ ಚಟ್ಟಕ್ಕೆ ಹೆಗಲು ಕೊಟ್ಟಿದ್ದಾನೆ. ಅಲ್ಲಿಂದ ಮಲ್ಪೆಯ ಹಿಂದೂ ರುದ್ರಭೂಮಿಗೆ ಬನ್ನಂಜೆ ರಾಜನನ್ನು ಕರೆದುಕೊಂಡು ಹೋಗಿದ್ದು, ರುದ್ರಭೂಮಿಯಲ್ಲಿ ಸುಮಾರು ಒಂದು ಗಂಟೆಗಳ ಪ್ರಕ್ರಿಯೆಗಳು ನಡೆದಿದೆ. ಹಿರಿಯರ ಅಪ್ಪಣೆಯಂತೆ ಎಲ್ಲಾ ಪ್ರಕ್ರಿಯೆಯನ್ನು ಬನ್ನಂಜೆ ರಾಜ ಮಾಡಿದ್ದಾನೆ.
Advertisement
ತಾಯಿಯ ಪಾದದಡಿ ಕಾಲಿಟ್ಟು ಕಣ್ಣೀರಿಟ್ಟ ಭೂಗತ ಪಾತಕಿ!
ಭೂಗತ ಪಾತಕಿ ಬನ್ನಂಜೆ ರಾಜ ಸುಮಾರು 25 ವರ್ಷಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದನು. 2015ರಲ್ಲಿ ಮೊರಕ್ಕೋದಲ್ಲಿ ಪೊಲೀಸರಿಗೆ ಶರಣಾಗಿದ್ದ. 2015ರ ಆಗಸ್ಟ್ 15ರಂದು ಉಡುಪಿಗೆ ಕರೆತರಲಾಗಿತ್ತು. 10ಕ್ಕೂ ಹೆಚ್ಚು ಪ್ರಕರಣಗಳು ಸದ್ಯ ಬನ್ನಂಜೆ ರಾಜನ ಮೇಲಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ. ಸುಮಾರು 25 ವರ್ಷಗಳಿಂದ ಕುಟುಂಬದ ಸಂಪರ್ಕದಿಂದ ದೂರವಾಗಿದ್ದ ರಾಜನಿಗೆ ಅಮ್ಮನ ಅನಾರೋಗ್ಯ ಬಹಳ ಕಾಡುತ್ತಿದ್ದಂತೆ. ಅಮ್ಮನ ಕೊನೆಯ ದಿನಗಳಲ್ಲಿ ಅವರ ಜೊತೆಗೆ ಇರಬೇಕು ಅಂತ ಅವನ ಮನಸ್ಸು ಹಂಬಲಿಸಿದೆ. ಹೀಗಾಗಿ ಪೊಲೀಸರಿಗೆ ಶರಣಾಗಿದ್ದಾನೆ.
Advertisement
ತಾಯಿಯ ಅನಾರೋಗ್ಯದ ಸಂದರ್ಭ ಮನೆಗೆ ಬಂದಿದ್ದ ಬನ್ನಂಜೆ, ಎರಡನೇ ಭೇಟಿಯ ಸಂದರ್ಭ ತಾಯಿ ಇಲ್ಲವಾಗಿದ್ದಾರೆ. ಅಂತ್ಯ ಸಂಸ್ಥಾರದ ಚಿತೆಯ ಮೇಲೆ ಮಲಗಿದ್ದ ತಾಯಿಯ ಪಾದದ ಕೆಳಗೆ ತಲೆಯಿಟ್ಟು ಕೆಲಕಾಲ ಕಣ್ಣೀರಿಟ್ಟಿದ್ದಾನೆ. ಬನ್ನಂಜೆ ರಾಜಾ, ತಂದೆ ಮತ್ತು ಅಣ್ಣನ ಜೊತೆಗೆ ತಾಯಿಯ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದ್ದಾನೆ. ಪ್ರಕ್ರಿಯೆಗಳೆಲ್ಲಾ ಮುಗಿಯುವ ತನಕ ಸ್ಮಶಾನದಲ್ಲಿರಲು ಅವಕಾಶ ನೀಡಿದ ಪೊಲೀಸರು ಮತ್ತೆ ನಗರ ಠಾಣೆಗೆ ಕರೆದೊಯ್ದಿದ್ದಾರೆ.
ಬನ್ನಂಜೆ ರಾಜನ ಸಂಬಂಧಿ ಸುನೀಲ್ ದಾಸ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ವಿಲಾಸಿನಿ ಶೆಟ್ಟಿಗಾರ್ ಉತ್ತಮ ಶಿಕ್ಷಕಿಯಾಗಿ ಉಡುಪಿಯ ಎಲ್ಲಾ ಭಾಗಗಳಲ್ಲೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದರು. ಕಾಲು ಜಾರಿ ಬಿದ್ದು ಮೃತಪಟ್ಟಿದ್ದು, ಬನ್ನಂಜೆ ರಾಜನನ್ನು ಬೆಳಗಾವಿಯಿಂದ ಕರೆತರಲು ಉಡುಪಿ ಕೋರ್ಟ್ ಅವಕಾಶ ನೀಡಿದೆ. ಇಡೀ ಕುಟುಂಬಸ್ಥರ ಪರವಾಗಿ ನಾವು ಕೋರ್ಟ್ ಮತ್ತು ಪೊಲೀಸ್ ಇಲಾಖೆಗೆ ಧನ್ಯವಾದ ಹೇಳುತ್ತೇವೆ. ತಾಯಿಯ ಕೊನೆಗಾಲದಲ್ಲಿ ಜೊತೆಗಿರಬೇಕು ಎಂದು ರಾಜೇಂದ್ರ (ಬನ್ನಂಜೆ ರಾಜ) ಹೇಳಿಕೊಂಡಿದ್ದನು. ಆದರೆ ತಾಯಿಯ ಮುಖವನ್ನಾದರೂ ನೋಡುವ ಅವಕಾಶ ಸಿಕ್ಕಿದ್ದು ನೆಮ್ಮದಿ ತಂದಿದೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv