ಕಲಬುರಗಿ: ಒಂದು ಕಡೆ ರೈತರಿಗೆ ಸಾಲದ ನೋಟಿಸ್ ನೀಡಿದ್ರೆ ಕಠಿಣ ಕ್ರಮ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ರೂ ಇತ್ತ ಕಲಬುರಗಿಯಲ್ಲಿ ಮಾತ್ರ ಲೋಕ್ ಅದಾಲತ್ ಮುಖಾಂತರ ಸಾಲ ಕಟ್ಟುವಂತೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ಸಿಎಂ ಆದೇಶಕ್ಕೆ ಬ್ಯಾಂಕ್ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.
ಸಿಎಂ ಕುಮಾರಸ್ವಾಮಿ ಸಾಲಮನ್ನಾ ಮಾಡ್ತೀವಿ, ಋಣಮುಕ್ತ ಪತ್ರ ಕೊಡ್ತೀವಿ ಅಂತಾ ಹೇಳ್ತಾನೇ ಇದ್ದಾರೆ. ಅಲ್ಲದೆ ಈಗಾಗಲೇ ಸಾಲಮನ್ನಾ ಪ್ರಕ್ರಿಯೆಗೆ ಚಾಲನೆ ಕೂಡ ನೀಡಿದ್ದು, ಪ್ರಾಯೋಗಿಕವಾಗಿ ಹಲವೆಡೆ ಋಣಮುಕ್ತ ಪತ್ರವನ್ನೂ ಕೊಟ್ಟಿದ್ದಾರೆ. ಜೊತೆಗೆ ರೈತರಿಗೆ ಬ್ಯಾಂಕ್ ಗಳು ನೋಟಿಸ್ ಕೊಡಬಾರದು ಅಂತಲೂ ಎಚ್ಚರಿಸಿದ್ದಾರೆ. ಆದ್ರೆ ನಮ್ಮ ಅನ್ನದಾತರಿಗೆ ಬ್ಯಾಂಕ್ ಗಳು ಕೊಡ್ತಿರೋ ಕಾಟ ಮಾತ್ರ ನಿಲ್ತಾನೇ ಇಲ್ಲ.
Advertisement
Advertisement
ಇಂದಿಗೂ ಕಲಬುರಗಿಯ ಗಣಜಲಖೇಡ ಗ್ರಾಮದ ರೈತರಿಗೆ ಬ್ಯಾಂಕ್ ಗಳು ನೋಟಿಸ್ ನೀಡುತ್ತಲೇ ಇವೆ. ಬೆಳೆ ಸಾಲದ ಹಣವನ್ನು ವಾಪಸ್ ಕಟ್ಟುವಂತೆ, ಕಲಬುರಗಿಯಲ್ಲಿ ಆಂಧ್ರ ಬ್ಯಾಂಕ್ ಅಧಿಕಾರಿಗಳು ಲೋಕ್ ಅದಾಲತ್ ಮೂಲಕ ಇಲ್ಲಿನ 25 ರೈತರಿಗೆ ನೋಟಿಸ್ ನೀಡಿದ್ದಾರೆ. ಅದರಂತೆ ರೈತರು ಕಲಬುರಗಿಯ ಲೋಕ್ ಅದಾಲತ್ ಕೋರ್ಟ್ ಗೆ ಹಾಜರಾಗಿದ್ದರು. ಇದೀಗ ರಾಜ್ಯ ಸರ್ಕಾರ ಸಾಲಮನ್ನಾ ಮಾಡ್ತೀವಿ ಅಂತಿದ್ರೂ ಯಾಕೆ ನೋಟಿಸ್ ಕೊಡ್ತಿದ್ದಾರೆ ಅಂತಾ ರೈತರು ಪ್ರಶ್ನಿಸುತ್ತಿದ್ದಾರೆ.
Advertisement
ಗ್ರಾಮದ 50ಕ್ಕೂ ಹೆಚ್ಚು ರೈತರಿಗೆ ಸಾಲ ಮರುಪಾವತಿಸುವಂತೆ ಲೀಗಲ್ ನೋಟಿಸ್ ಜಾರಿಯಾಗಿದೆ. ಇಷ್ಟಕ್ಕೆ ಸುಮ್ಮನಾಗದ ಆಂಧ್ರ ಬ್ಯಾಂಕ್ ಅಧಿಕಾರಿಗಳು, ಸಾಲ ಪಡೆದ ರೈತರ ವೃದ್ಧಾಪ್ಯ ವೇತನ ಹಾಗೂ ಉದ್ಯೋಗ ಖಾತ್ರಿಯಡಿ ಬಂದ ಹಣವನ್ನು ಸಾಲದಲ್ಲಿ ಕಟ್ ಮಾಡಿಕೊಳ್ತಿದ್ದಾರೆ ಅಂತ ರೈತ ಮಹಿಳೆಯರು ಆರೋಪಿಸುತ್ತಿದ್ದಾರೆ.
Advertisement
ದುರಂತ ಅಂದ್ರೆ ಪ್ರಾಯೋಗಿಕವಾಗಿ ರೈತರಿಗೆ ಋಣಮುಕ್ತ ಪತ್ರ ನೀಡಿದ ಜಿಲ್ಲೆಯಲ್ಲಿಯೇ ರೈತರ ಸಾಲಮನ್ನಾ ಆಗಿಲ್ಲ. ಹೀಗಿರುವಾಗ ರಾಜ್ಯದ ರೈತರ ಸಾಲಮನ್ನಾ ಆಗುವುದೇ ಎಂಬ ಪ್ರಶ್ನೆ ಇದೀಗ ಮತ್ತೆ ರೈತರಲ್ಲಿ ಆತಂಕ ಮೂಡಿಸಿದೆ. ಕಲಬುರಗಿಯ ರೈತರನ್ನು ಆಂಧ್ರ ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಸಿಎಂ ಕುಮಾರಸ್ವಾಮಿ ಪಾರು ಮಾಡ್ತಾರಾ ಅಂತ ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv