ಕೋಲಾರ: ಗ್ರಾಹಕರು ಕನ್ನಡದಲ್ಲಿ ಚಲನ್ ನೀಡುವಂತೆ ಕೇಳಿದಾಗ ಬ್ಯಾಂಕ್ ಅಧಿಕಾರಿಯೂ ಕನ್ನಡದಲ್ಲಿ ಚಲನ್ ಸಿಗುವುದಿಲ್ಲವೆಂದು ದರ್ಪದಿಂದ ನಡೆದುಕೊಂಡ ಘಟನೆ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದೆ.
ರಾಜ್ಯದ ಹಲವು ಬ್ಯಾಂಕ್‍ಗಳಲ್ಲಿ ಕನ್ನಡಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ಇರುವುದು ಈಗ ಮತ್ತೊಮ್ಮೆ ಸಾಬೀತಾಗಿದ್ದು, ಜಿಲ್ಲೆಯ ಬಂಗಾರಪೇಟೆಯ ಕೆನರಾ ಬ್ಯಾಂಕ್‍ನಲ್ಲಿ ಅಧಿಕಾರಿ ಹಿಂದಿಯಲ್ಲೇ ಮಾತಾಡುವಂತೆ ಗ್ರಾಹಕರ ಮೇಲೆ ದಬ್ಬಾಳಿಕೆ ನಡೆಸಿದ್ದಾನೆ.
Advertisement
ಬಂಗಾರಪೇಟೆಯ ನಿವಾಸಿ ಗ್ರಾಹಕ ಪ್ರಸನ್ನಕುಮಾರ್ ಹಣ ಪಾವತಿಸಲು ಬ್ಯಾಂಕಿಗೆ ತೆರಳಿದ್ದರು. ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಚಲನ್ ಮುದ್ರಿಸಿದ ಹಿನ್ನೆಲೆಯಲ್ಲಿ ಪ್ರಸನ್ನರವರು ಬ್ಯಾಂಕ್ ಸಿಬ್ಬಂದಿಗೆ ಕನ್ನಡದಲ್ಲಿ ಚಲನ್ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿ ಹಿಂದಿಯಲ್ಲೇ ಮಾತನಾಡುವಂತೆ ಪ್ರಸನ್ನರಿಗೆ ತಾಕೀತು ಮಾಡಿದ್ದಾರೆ.
Advertisement
ಈ ವೇಳೆ ಅಲ್ಲೇ ಇದ್ದ ಬ್ಯಾಂಕ್ ಅಧಿಕಾರಿ ನಿನಗೆ ಏನೇ ಬೇಕಾದರೂ ಹಿಂದಿಯಲ್ಲೇ ಕೇಳು, ಹಿಂದಿ ನ್ಯಾಷನಲ್ ಭಾಷೆ ನಾನು ಅದರಲ್ಲೇ ಉತ್ತರಿಸುತ್ತೇನೆ ಎಂದು ಗ್ರಾಹಕನ ಮೇಲೆ ದರ್ಪ ಮೆರೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಗ್ರಾಹಕ ನೀವು ಇರುವುದು ಕರ್ನಾಟಕದಲ್ಲಿ, ಮೊದಲು ನೀವು ಕನ್ನಡ ಕಲಿಯಿರಿ ಎಂದು ಹೇಳಿದ್ದಾರೆ. ಬ್ಯಾಂಕ್ ಸಿಬ್ಬಂದಿ ದರ್ಪ ನಡೆಸಿದರ ಸಂಬಂಧ ಗ್ರಾಹಕ ಪ್ರಸನ್ನರವರು ಬಂಗಾರಪೇಟೆ ಪೊಲೀಸರಿಗೆ ಈಗ ದೂರು ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews