ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರು ಗ್ರಾಮದಲ್ಲಿ ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಬ್ಯಾಂಕ್ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಗ್ರಾಮದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನಲ್ಲಿ ದರೋಡೆ ಮಾಡಲಾಗಿದೆ. ದರೋಡೆಗೂ ಮುನ್ನ ಬ್ಯಾಂಕಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಬಾಗಿಲು ಮುರಿದು ಒಳನುಗ್ಗಿದ್ದಾರೆ.
ಸಿಸಿ ಕ್ಯಾಮೆರಾ ಹಾಗೂ ಸೈರನ್ ವೈಯರ್ ಗಳನ್ನು ಕಟ್ ಮಾಡಿ ದರೋಡೆ ಮಾಡಿದ್ದಾರೆ. ಬ್ಯಾಂಕ್‍ನಲ್ಲಿದ್ದ ಅಪಾರ ಪ್ರಮಾಣದ ಹಣ ಕಳ್ಳತನವಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಇಂದು ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಾಗಿಲು ತೆರೆಯುವ ವೇಳೆ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಸಿರಿಗೇರಿ ಪೊಲೀಸರು ದೌಡಾಯಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.