ಬಾಗಲಕೋಟೆ: ಬ್ಯಾಂಕ್ ದರೋಡೆಗೆ ಯತ್ನಿಸಿ ಅರ್ಧದಲ್ಲೇ ಪರಾರಿಯಾಗಿದ್ದ ದರೋಡೆಕೋರರನ್ನು ಬಾಗಲಕೋಟೆ ಗ್ರಾಮೀಣ ಠಾಣೆಯ ಪೊಲೀಸರು (Bagalkot Rural Police) ಸೆರೆ ಹಿಡಿದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ದರೋಡೆಗೆ ಯತ್ನ:
ನ. 25ರ ರಾತ್ರಿ ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (Karnataka Vikas Grameena Bank ) ದರೋಡೆಗೆ ತಂಡವೊಂದು ಸ್ಕೆಚ್ ಹಾಕಿತ್ತು. ಬೀಗ ಮುರಿದು ಒಳಗೆ ನುಗ್ಗಿದ್ದ ಗ್ಯಾಂಗ್ ಸೈರನ್ ಬಂದ್ ಮಾಡಿ, ನಂತರ ಸಿಸಿ ಕ್ಯಾಮೆರಾ ಒಡೆದು, ಅಡುಗೆ ಅನಿಲ ಸಿಲಿಂಡರ್, ಗ್ಯಾಸ್ ಕಟ್ಟರ್ ಗನ್‌ನಿಂದ ಬರೋಬ್ಬರಿ ಒಂದೂವರೆ ತಾಸು ಸ್ಟ್ರಾಂಗ್ ರೂಮ್ ಒಡೆಯಲು ವಿಫಲ ಯತ್ನ ನಡೆಸಿತ್ತು. ಆದರೆ ಅದು ಸಾಧ್ಯವಾಗದೇ ಇದ್ದಾಗ ಅಷ್ಟಕ್ಕೆ ಬಿಟ್ಟು ಪರಾರಿಯಾಗಿದ್ದರು. ಕಳ್ಳತನಕ್ಕೆ ವಿಫಲ ಯತ್ನ ನಡೆದ ನಂತರ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಭಿಸಿದ್ದರು. ಒಂದು ಸಿಸಿಟಿವಿ ಒಡೆಯದ ಕಾರಣ ಆ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳತನದ ದೃಶ್ಯವನ್ನು ಆಧಾರಿಸಿ ತನಿಖೆ ಚುರುಕುಗೊಳಿಸಿದ್ದರು.
Advertisement
Advertisement
ಸಿಕ್ಕಿಬಿದ್ದಿದ್ದು ಹೇಗೆ?
ಡಿ. 11 ರಂದು ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಕ್ರಾಸ್ ಬಳಿ ಪೊಲೀಸರು ನಾಕಾ ಬಂದಿ ಹಾಕಿ ಎಂದಿನಂತೆ ಪರಿಶೀಲನೆ ನಡೆಸುತ್ತಿದ್ದರು. ಆ ದಿನ ರಾತ್ರಿ 1:05ರ ವೇಳೆ ಒಂದು ಕಾರು ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು. ಸಂಶಯ ಬಂದು ಪೊಲೀಸರು ಕಾರು ತಪಾಸಣೆ ಮಾಡಿದಾಗ ಕಾರಿನಲ್ಲಿ ಸಿಲಿಂಡರ್, ಗ್ಯಾಸ್ ಕಟ್ಟರ್, ಖಾರದಪುಡಿ, ಕಬ್ಬಿಣದ ರಾಡ್, ಸ್ಕ್ರೂ ಡ್ರೈವರ್, ಮಂಕಿ ಕ್ಯಾಪ್‌ಗಳು ಪತ್ತೆಯಾಗಿದ್ದವು.
Advertisement
ಗ್ರಾಮೀಣ ಠಾಣೆ ಪೊಲೀಸರು ಸಂಶಯಾಸ್ಪದ ವ್ಯಕ್ತಿಗಳನ್ನ ಠಾಣೆಗೆ ತಂದು ಬೆಂಡೆತ್ತಿ ವಿಚಾರಣೆ ನಡೆಸಿದಾಗ ಬಾಗಲಕೋಟೆಯ ತಾಲೂಕಿನ ಶಿರೂರು ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದಾಗಿ ಖದೀಮರು ತಿಳಿಸಿದ್ದಾರೆ. ಪೊಲೀಸರ ಮತ್ತಷ್ಟು ವಿಚಾರಣೆ ನಡೆಸಿದಾಗ ರಾಂಪುರ ಬ್ಯಾಂಕ್ ದರೋಡೆ ವಿಫಲ ಯತ್ನದ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ.
Advertisement
ನವನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ ಆರೋಪದ ಅಡಿ ಹುಲಗಪ್ಪ ಎಂಬಾತನ ಮೇಲೆ ಕೇಸ್ ದಾಖಲಾಗಿತ್ತು. ಆತನ ಕಾಲಿಗೆ ಗಾಯ ಆಗಿ ನಡೆಯುವ ಸ್ಟೈಲ್ ಬದಲಾಗಿತ್ತು. ಸಿಕ್ಕಿಬಿದ್ದ ದರೋಡೆಕೋರರಲ್ಲಿ ಒಬ್ಬಾತನ ನಡೆಯುವ ಸ್ಟೈಲ್ ಆರೋಪಿ ಹುಲಗಪ್ಪನ ರೀತಿಯೇ ಇತ್ತು. ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ನಾನೇ ಆ ವ್ಯಕ್ತಿ ಎಂದು ಹೇಳಿದ್ದಾನೆ. ಈ ಆರೋಪಿಗಳು ಹತ್ತಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಸಂಶಯವಿದ್ದು ತನಿಖೆ ಮುಂದುವರೆದಿದೆ.