ಕಾರವಾರ: ಗ್ಯಾರೇಜಿನಲ್ಲಿ ರಿಪೇರಿಗಾಗಿ ಬಿಟ್ಟಿದ್ದ ಲಾರಿಯನ್ನು ಬ್ಯಾಂಕ್ ಸಿಬ್ಬಂದಿ ಏಕಾಏಕಿ ಬಂದು ಜಪ್ತಿ ಮಾಡುವ ಜೊತೆಗೆ ಲಾರಿಯ ಟಾಯರ್ ಕಳವು ಮಾಡಿದ ಘಟನೆ ಯಲ್ಲಾಪುರದಲ್ಲಿ ನಡೆದಿದೆ. ದೂರು ನೀಡಿದರೂ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿಲ್ಲ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಕೆ.ಎಸ್ ಮಣಿ ಆರೋಪಿಸಿದ್ದಾರೆ.
ಕಾರವಾರ ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಪುರ ಮೂಲದ ಮಹಮದ್ ರಫೀಕ್ ಎನ್ನುವವರು ಕಳಚೆಯ ಸೈಹಾದ್ರಿ ಸೇವಾ ಸಹಕಾರಿ ಬ್ಯಾಂಕ್ ನಿಂದ 19.58 ಲಕ್ಷ ರೂ ಸಾಲ ಪಡೆದು ಲಾರಿ ಖರೀದಿಸಿದ್ದರು. ಡಿ.23 ರಂದು ಲಾರಿಯನ್ನು ಹುಬ್ಬಳ್ಳಿಯ ಗ್ಯಾರೇಜ್ ಒಂದರಲ್ಲಿ ರಿಪೇರಿಗೆ ಬಿಡಲಾಗಿತ್ತು. ಈ ವೇಳೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಲಾರಿಯನ್ನು ಜಪ್ತಿಮಾಡಿದ್ದಾರೆ. ಆದರೆ ಲಾರಿಯನ್ನು ಬ್ಯಾಂಕಿಗೆ ಕೊಂಡೊಯ್ಯದೇ ಸಿಬ್ಬಂದಿಯೋರ್ವರ ಮನೆಗೆ ಕೊಂಡೊಯ್ದು ಲಾರಿಯ ಟಾಯರ್ ತೆಗೆದು ಬದಲಿಗೆ ಹಳೆಯ ಟಯರ್ ಹಾಕಿದ್ದಾರೆ. ಅಲ್ಲದೇ ಎರಡು ದಿನದ ಬಳಿಕ ಬ್ಯಾಂಕಿನ ಬಳಿ ಲಾರಿ ತಂದು ಇಟ್ಟಿದ್ದಾರೆ ಎಂದು ಆರೋಪಿಸಿದರು.
Advertisement
ಲಾರಿಯ ಟಾಯರ್ ಕಳವು ಮಾಡಿದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಸ್ವೀಕರಿಸಿರಲಿಲ್ಲ. ಬಳಿಕ ದೂರು ಸ್ವೀಕರಿಸಿದರೂ ಸರಿಯಾಗಿ ವಿಚಾರಣೆ ನಡೆಸಿಲ್ಲ. ಲಾರಿಯ ಟಾಯರ್ ತೆಗೆದ ಜಾಗದಲ್ಲಿ ಪಂಚನಾಮೆ ನಡೆಸಿಲ್ಲ. ಹೀಗಾಗಿ ಸರಿಯಾದ ಕ್ರಮ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಿದ್ದೇವೆ. ಇಲ್ಲವಾದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಮುಂಭಾಗ ರಾಜ್ಯ ಲಾರಿ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸುತ್ತೇವೆ ಎಂದರು.
Advertisement
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಗಿರೀಶ ಮಲ್ನಾಡು, ಮಾಧವ ನಾಯಕ, ಕಿರಣ ನಾಯ್ಕ, ಶ್ರೀಕೃಷ್ಣ, ನೂರ್ ಭಾಷಾ, ಪ್ರಶಾಂತನಾಯ್ಕ, ದಿಲೀಪ ಕುಮಾರ, ಸುಜಯ ಮರಾಠಿ, ಕ್ವಾಜಾ ಅಕ್ತರ ಮಹಮದ್ ರಫೀಕ್ ಇದ್ದರು.