ಮಂಡ್ಯ: ಸಾಲ ಮರುಪಾವತಿ ಮಾಡದ ಹಿನ್ನೆಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ಹಾಗೂ ‘ಕೈ’ ಮುಖಂಡನ ಖಾಸಗಿ ಶಿಕ್ಷಣ ಸಂಸ್ಥೆಗೆ ಬ್ಯಾಂಕ್ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇದೀಗ ಶಾಲೆಯಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಬಳಿ ಇರುವ ಕೇಂಬ್ರಿಡ್ಜ್ ಸ್ಕೂಲ್ & ಕಾಲೇಜಿಗೆ ಬ್ಯಾಂಕ್ ಅಧಿಕಾರಿಗಳು ಬೀಗ ಹಾಕಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಪರಿಸ್ಥಿತಿಗೆ ಸಿಲುಕಿದೆ. ಶಾಲೆಯ ಆಡಳಿತ ಮಂಡಳಿ ಯಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ಬಂದಿದ್ದು, ಸಾಲಸೋಲ ಮಾಡಿ ಫೀಜ್ ಕಟ್ಟಿದ್ದ ಪೋಷಕರು ಆತಂಕದಲ್ಲಿ ಇದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ಡಿಕೆಶಿ ಆಪ್ತನಾದ ಹರಳಹಳ್ಳಿ ವಿಶ್ವನಾಥ್‌ಗೆ ಸೇರಿದ ಸ್ಕೂಲ್ ಇದಾಗಿದೆ.
ಬೆಂಗಳೂರಿನ ವಿಶ್ವೇಶ್ವರಯ್ಯ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಶಾಲೆಯ ಮೇಲೆ ಸಾಲವನ್ನು ಮಾಡಲಾಗಿದೆ. ಆದರೆ, ಸಾಲವನ್ನು ಬ್ಯಾಂಕ್‌ನವರ ಟೈಂಬಾಂಡ್ ಮುಗಿದರೂ ಮರುಪಾವತಿ ಮಾಡಿಲ್ಲ. ಹೀಗಾಗಿ ಬ್ಯಾಂಕ್‌ನಿಂದ ನೋಟೀಸ್ ನೀಡಿದ್ರೂ ಸಾಲ ಮರುಪಾವತಿ ಮಾಡಿಲ್ಲ. ಆದ್ದರಿಂದ ಕಳೆದ ಶನಿವಾರವೇ ಸ್ಕೂಲ್ ಗೇಟ್‌ಗೆ ಬ್ಯಾಂಕ್ ಅಧಿಕಾರಿಗಳು ಬೀಗ ಹಾಕಿದ್ದಾರೆ. ಒಂದು ವಾರದಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ.
ಬೀಗ ಹಾಕಿದರೂ ಒಂದು ಕಡೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಮಾಡಲಾಗುತ್ತಿದೆ. ಇದೀಗ ಶಾಲೆ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ‘ಸಾಲಸೂಲ ಮಾಡಿ ಫೀಜ್ ಕಟ್ಟಿದ್ದೀವಿ. ಈಗ ಬ್ಯಾಂಕ್‌ನವರು ಶಾಲೆಗೆ ಬೀಗ ಹಾಕಿದ್ದಾರೆ. ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು’ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.